ಇಂದು ಮಾರ್ಚ್ 31 ಹಣಕಾಸು ವರ್ಷ(Finanacial Year) ಅಂತ್ಯವಾಗುವ ದಿನ! ಇಂದು ಕೂಡ ಸತತವಾಗಿ 9ನೇ ಬಾರಿಗೆ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಯಲ್ಲಿ 80 ಪೈಸೆ ಹೆಚ್ಚಳ ಮಾಡಿದೆ. ನವದೆಹಲಿಯಲ್ಲಿ(New Delhi) ಇಂದು ಅಧಿಕೃತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 80 ಪೈಸೆ ಏರಿಕೆ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಮಾರ್ಚ್ 21 ರಂದು ಪ್ರಾರಂಭವಾದ ಇಂಧನ ಬೆಲೆ ಏರಿಕೆ ಇಂದು 10 ನೇ ದಿನಕ್ಕೆ ಕಾಲಿಟ್ಟಿದೆ. ಇಳಿಕೆ ಕಾಣದಿದ್ದರೂ ತೊಂದರೆಯಿಲ್ಲ, ಆದ್ರೆ ಏರಿಕೆಯಾಗುತ್ತಿರುವುದೇ ಜನಸಾಮಾನ್ಯರಿಗೆ ದೊಡ್ಡ ಹೊಡೆತವಾಗಿದೆ. ಕಳೆದ 10 ದಿನದಲ್ಲಿ 6.40 ಪೈಸೆ ಹೆಚ್ಚಳವಾಗಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್ಗೆ 80 ಪೈಸೆ ಹೆಚ್ಚಳವಾಗಿದ್ದು, ಇಂದು ಪೆಟ್ರೋಲ್ ಪ್ರತಿ ಲೀಟರ್ ಬೆಲೆ 101.81 ರೂ. ಮತ್ತು ಡೀಸೆಲ್ ಲೀಟರ್‍ಗೆ 93.07 ರೂ. ಗರಿಷ್ಟತೆಯನ್ನು ತಲುಪಿದೆ. ಇದು ನವದೆಹಲಿಯಲ್ಲಿ ಕಂಡುಬಂದಿರುವ ಇಂದಿನ ದರಪಟ್ಟಿ. ಅದೆ ಮುಂಬೈನಲ್ಲಿ ಎಷ್ಟು ಎಂದು ತಿಳಿಯುವುದಾದರೆ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‍ಗೆ 84 ಪೈಸೆ ಹೆಚ್ಚಳವಾಗಿದೆ.
84 ಪೈಸೆ ಹೆಚ್ಚಳದಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 116.72 ರೂ. ಏರಿಕೆ ಕಂಡರೆ ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ 100.94 ರೂ. ಏರಿಕೆ ಕಂಡಿದೆ. ಇದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 10 ದಿನಗಳಿಂದ ಏರಿಕೆ ಕಾಣುತ್ತಲೇ ಇದೆ. ಇದರಿಂದ ಜನಸಾಮಾನ್ಯರಿಗೆ ಭಾರಿ ಹೊಡೆತ ಬಿದ್ದಿದ್ದು, ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಾಹನವನ್ನು ಚಲಾಯಿಸಬೇಕೋ ಅಥವಾ ಮನೆಯಲ್ಲಿ ತೊಳೆದು ಕವರ್ ಹೊದ್ದಿಸಿ ನಿಲ್ಲಿಸಬೇಕೋ ಜನರಿಗೆ ತಿಳಿಯದಾಗಿದೆ! ಹೌದು, ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರಿಂದ ಹಿಡೀ ಶಾಪಗಳೇ ಹರಿದುಬರುತ್ತಿದೆ.

ಈ ಕುರಿತು ಬುಧವಾರ ಪ್ರತಿಕ್ರಿಯೇ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ನಮಗೆ ಪರಿಣಾಮ ಬೀರಿದೆ. ಹೀಗಾಗಿ ಇಂಧನ ಬೆಲೆಯಲ್ಲಿ ಏರಿಕೆ ಕಾಣಿಸುತ್ತಿದೆ ಎಂದು ಹೇಳುವ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ. ಬುಧವಾರ ಯೂಟ್ಯೂಬರ್ ಧ್ರುವ್ ರತಿ ಅವರು ಕಳೆದ 21ನೇ ತಾರೀಖಿನಿಂದ 30 ರವರೆಗೂ ಇಂಧನ ಬೆಲೆ ಏರಿಕೆ ಹೇಗೆ ಕಂಡುಬಂದಿದೆ? ಎಷ್ಷು ಕಂಡುಬಂದಿದೆ ಎಂಬ ವರದಿಯನ್ನು ಸರಳವಾಗಿ ಈ ರೀತಿ ತಿಳಿಸಿದ್ದಾರೆ. ಧ್ರುವ್ ರತಿ ನೀಡಿರುವ ಮಾಹಿತಿ ಹೀಗಿದೆ :

ಎಲೆಕ್ಷನ್ ಮುಗಿದ ಬಳಿಕ ಇಂಧನ ಬೆಲೆ ಏರಿಕೆ ದರ ಹೀಗಿದೆ :
21 ಮಾರ್ಚ್ : 110 ರೂ.
22 ಮಾರ್ಚ್ : 110.8 ರೂ.
23 ಮಾರ್ಚ್ : 111.7 ರೂ.
24 ಮಾರ್ಚ್ : 111.7 ರೂ.
25 ಮಾರ್ಚ್ : 112.5 ರೂ.
26 ಮಾರ್ಚ್ : 113.4 ರೂ.
27 ಮಾರ್ಚ್ : 113.9 ರೂ.
28 ಮಾರ್ಚ್ : 114.2 ರೂ.
29 ಮಾರ್ಚ್ : 115.0 ರೂ.
30 ಮಾರ್ಚ್ : 115.9 ರೂ.