ಈ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಪಿಎಂ ಕಿಸಾನ್(PM Kisan) ಯೋಜನೆ(Yojana)! ಹೌದು, ಯಾರಿಗೂ ತಿಳಿಯದ ಸುದ್ದಿಯಂತೆ, ಬೂದಿ ಮುಚ್ಚಿದ ಕೆಂಡದಂತೆ ಅವಿತು ಹೋಗಿದೆ. ಪ್ರಧಾನ ಮಂತ್ರಿ ಕಿಸಾನ್ ಆಪ್ ದೇಶದ ಎಲ್ಲಾ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಈ ಒಂದು ಆಪ್ ಯಾರಿಗೆ ಉಪಯೋಗವಾಗುತ್ತಿದೆಯೊ ತಿಳಿದಿಲ್ಲ. ಆದ್ರೆ ಕರ್ನಾಟಕದಲ್ಲಿ ನಮ್ಮ ರೈತರಿಗಂತೂ ಖಂಡಿತ ಉಪಯೋಗವಾಗುತ್ತಿಲ್ಲ ಬದಲು ತೊಂದರೆಯಾಗುತ್ತಿದೆ ಎಂಬುದು ಅಕ್ಷರಶಃ ಸತ್ಯ.

ನಮ್ಮ ರೈತರಿಗೆ ಕನ್ನಡ ಬಿಟ್ಟರೇ ಬೇರೆ ಭಾಷೆ ತಿಳಿದಿಲ್ಲ. ಭಾರತದ ಮುಖ್ಯ ರಾಜ್ಯಗಳ ಭಾಷೆಯನ್ನು ಅಳವಡಿಸಿದ್ದಾರೆ ವಿನಃ ಕನ್ನಡ(Kannada) ಭಾಷೆಯನ್ನಲ್ಲ(Language)! ಕನ್ನಡ ಭಾಷೆಯನ್ನು ಬಿಟ್ಟರೇ ಬೇರೆಲ್ಲಾ ಭಾಷೆಯನ್ನು ಕಿಸಾನ್ ಆಪ್(App) ಒಳಗೊಂಡಿದೆ. ನಮ್ಮ ರೈತರಿಗೆ ಮಳೆಯ ಮಾಹಿತಿ, ಬೆಳೆಯ ಮಾಹಿತಿ, ಬೆಳೆಹಾನಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ಕುರಿತಾದ ಮಾಹಿತಿ ಸಂಗ್ರಹಿಸಲು ಇರುವ ಆಪ್ ಉಪಯೋಗಕ್ಕೆ ಬಾರದಂತಿದೆ. ಇಷ್ಟು ಅಗತ್ಯ ಮಾಹಿತಿಗಳನ್ನು ತಿಳಿಯಲು ಈ ಆಪ್ ನಲ್ಲಿ ನಮ್ಮ ಭಾಷೆಯಿಲ್ಲ ಎಂಬುದೇ ಬೇಸರದ ಸಂಗತಿ.

ಕಿಸಾನ್ ಆಪ್ ಯೋಜನೆಯನ್ನು ವಿವಿಧ ಪಾಲುದಾರರ ಮೂಲಕ ಜಾರಿಗೊಳಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಸಣ್ಣ ರೈತರನ್ನು ಯೋಜನೆಯಡಿಯಲ್ಲಿ ತರುವ ಧ್ಯೇಯವಾಗಿದೆ. ಈ ಕಾರ್ಯಕ್ರಮವು ರೈತರಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿಗಳು ಘೋಷಿಸಿದ ಈ ಯೋಜನೆಯ ಮುಖ್ಯ ಉದ್ದೇಶ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸುವುದು. ಈ ಯೋಜನೆಯನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಎಂದು ಕರೆಯಲಾಗುತ್ತದೆ.
ಇದು ಕೇಂದ್ರ ವಲಯದ ಯೋಜನೆಯಾಗಿದ್ದರೂ, ರಾಜ್ಯ ಸರ್ಕಾರಗಳು ಅವುಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಫಲಾನುಭವಿಗಳ ಹೆಸರನ್ನು ಸೇರಿಸಲು ಅಥವಾ ಹೊರಗಿಡಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ಯಾವುದೇ ಏಜೆಂಟ್ ಅನ್ನು ನೇಮಿಸಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವು ಸೈಬರ್ ಅಪರಾಧಿಗಳು ರೈತರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸಿ ಅವರ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ರೈತರನ್ನು ದಾರಿ ತಪ್ಪಿಸುವ ಯೋಜನೆಯನ್ನು ಬಳಸುತ್ತಿದ್ದಾರೆ ಎಂಬ ದೂರುಗಳು ಕೂಡ ಈ ಹಿಂದೆ ಕೇಳಿಬಂದಿವೆ.
ಸದ್ಯ ದೇಶದ ರೈತರಿಗೆ ಅನುಕೂಲವಾಗಲಿ ಎಂದು ಸ್ಥಾಪನೆ ಮಾಡಿರುವ ಕಿಸಾನ್ ಆಪ್ ನಲ್ಲಿ ಎಲ್ಲಾ ಭಾಷೆಯೂ ತುಂಬಿದೆ. ಆದ್ರೆ ನಮ್ಮ ರಾಜ್ಯದ ರೈತರಿಗೆ ಮಾಹಿತಿ ತಿಳಿಯಲು ನಮ್ಮ ಭಾಷೆಯ ಆಯ್ಕೆಯೇ ಇಲ್ಲ! ಈ ವಿಷಯ ಕುರಿತು ಶೀಘ್ರವೇ ಕೃಷಿ ಇಲಾಖೆ ಸಚಿವರಾದ ಬಿ.ಸಿ ಪಾಟೀಲ್ ಅವರು ಕ್ರಮಕೈಗೊಳ್ಳಬೇಕು, ಪಿಎಂ ಕಿಸಾನ್ ಆಪ್ ನಲ್ಲಿ ಕನ್ನಡ ಭಾಷೆ ಲಭ್ಯವಾಗಬೇಕು. ನಮ್ಮ ರೈತರಿಗೆ ನಮ್ಮ ಭಾಷೆಯಲ್ಲೇ ಮಾಹಿತಿ ದೊರೆಯಬೇಕೇ ವಿನಃ ಅನ್ಯ ಭಾಷೆಯಲ್ಲಲ್ಲ!

ರಾಜ್ಯದ ಅದೆಷ್ಟೋ ರೈತರಿಗೆ ಇನ್ನು ಸಹ ಈ ಪಿಎಂ ಕಿಸಾನ್ ಆಪ್ ಚಾಲ್ತಿಯಲ್ಲಿರುವ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲ. ಈ ಕುರಿತು ಸರ್ಕಾರ ಆಕಾಶವಾಣಿ, ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಪ್ರಚಾರ ಕೊಡಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿ. ರೈತಪರವಿರಲಿ ನಮ್ಮ ಸರ್ಕಾರ ಯೋಜನೆಗಳು.