ನವದೆಹಲಿ, ಮಾ. 06: ಕೋವಿಡ್-19 ಲಸಿಕಾ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಫೋಟೋವನ್ನು ತೆಗೆಯುವಂತೆ ಚುನಾವಣಾ ಆಯೋಗ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಪಶ್ಚಿಮಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಪ್ರಧಾನಿ ಮೋದಿ ಲಸಿಕೆ ಪಡೆಯುತ್ತಿರುವ ಚಿತ್ರವನ್ನು ಪ್ರಮಾಣಪತ್ರದಲ್ಲಿ ಬಳಸಿ ಪ್ರಚಾರ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಇದೀಗ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ನೀಡಿದ ಸೂಚನೆಯಲ್ಲಿ ಚುನಾವಣಾ ನೀತಿ ಸಂಹಿತೆಯ ಕೆಲವು ನಿಬಂಧನೆಗಳು ಉಲ್ಲಂಘನೆಯಾಗಿರುವ ಬಗ್ಗೆ ಉಲ್ಲೇಖ ಮಾಡಿದ್ದು, ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತಿನ ಬಳಕೆಗೆ ನಿರ್ಬಂಧ ಹೇರಿದೆ.
ಪಿಟಿಐ ವರದಿಯ ಪ್ರಕಾರ, ಚುನಾವಣಾ ಆಯೋಗವು ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೇ ಮುಂಬರುವ ಚುನಾವಣೆ ಹಿನ್ನಲೆಯಲ್ಲಿ, ನೀತಿ ಸಂಹಿತೆಯನ್ನು ಪಾಲಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ.
ಪಶ್ಚಿಮಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳಲ್ಲಿ, ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಇದೀಗ ಆರೋಗ್ಯ ಸಚಿವಾಲಯ, ಪ್ರಧಾನಿ ಮೋದಿ ಚಿತ್ರವನ್ನು ಕೋವಿಡ್-19 ಪ್ರಮಾಣಪತ್ರದಿಂದ ತೆಗೆಯಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಟಿಎಂಸಿ ಪಕ್ಷದ ಸಂಸದ ಡೆರೇಕ್ ಓ ಬ್ರಯಾನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆಯ ಉಲ್ಲಂಘಟನೆಯಾಗುತ್ತಿದೆ ಎಂದು ದೂರು ಸಲ್ಲಿಸಿದ್ದರು.