- ಮಣಿಪುರಕ್ಕೆ ಭೇಟಿ ನೀಡಿ ಭರವಸೆ ನೀಡಿದ ಪ್ರಧಾನಿ ಮೋದಿ
- ಮಣಿಪುರದಲ್ಲಿ ಅಭಿವೃದ್ದಿ ಯೋಜನೆಗೆ 8,300 ಕೋಟಿ ಹಣ. ಬಿಡುಗಡೆ
- ಮಣಿಪುರದಲ್ಲಿ ಶಾಂತಿ ಕಾಪಾಡಬೇಕಿದೆ – ಮೋದಿ (PM Narendra Modi visits Manipur)
Manipur: ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ಅಶಾಂತಿಯ ವಾತಾವರಣ ಆವರಿಸಿದೆ. 2023ರ ಮೇ ತಿಂಗಳಿನಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ
ಪ್ರಾರಂಭವಾದ ಸಂಘರ್ಷ ರಾಜ್ಯದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಇನ್ನು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿ,
“ಮಣಿಪುರವನ್ನು ನಾವು ಶಾಂತಿಯ ಹಾದಿಯಲ್ಲಿ ಕೊಂಡೊಯ್ಯಬೇಕು” ಎಂದು ಜನತೆಗೆ ಭರವಸೆ ನೀಡಿದ್ದಾರೆ. ಅವರ ಭೇಟಿಯ ವೇಳೆ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಜೊತೆಗೆ,
ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಪುನಃ ಸ್ಥಾಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ನೀಡಿದ್ದಾರೆ.
ಈ ಹಿಂದೆ ಮಣಿಪುರದಲ್ಲಿ ಸಂಘರ್ಷವು ಹೈಕೋರ್ಟ್(High Court) ನೀಡಿದ ಮೀಸಲಾತಿ ಸಂಬಂಧಿತ ತೀರ್ಪಿನಿಂದ ಆರಂಭವಾಯಿತು. ಮೈತೇಯಿ ಸಮುದಾಯಕ್ಕೆ ಮೀಸಲಾತಿ ನೀಡಲು ಸೂಚಿಸಿದ ತೀರ್ಪು,
ಕುಕಿ ಸಮುದಾಯಕ್ಕೆ ಅಸಮಾಧಾನ ಉಂಟುಮಾಡಿತು. ಇದರಿಂದ ಸರ್ಕಾರಿ ಉದ್ಯೋಗ(Govt job) ಹಾಗೂ ಹಕ್ಕುಗಳಲ್ಲಿ ಹಂಚಿಕೆ ಸಂಬಂಧಿತ ವಿವಾದಗಳು ತೀವ್ರಗೊಂಡವು.
ಈ ಸಂಘರ್ಷಗಳು ಹಿಂಸಾಚಾರಕ್ಕೆ ತಿರುಗಿ, ಸುಮಾರು 250 ಜನರು ಸಾವನ್ನಪ್ಪಿದರು. 60 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆಡೆ ಆಶ್ರಯಕ್ಕೆ ತೆರಳಬೇಕಾಯಿತು.

ತಿಂಗಳುಗಟ್ಟಲೆ ಇಂಟರ್ನೆಟ್ ಸಂಪರ್ಕ(Internet connection) ಸ್ಥಗಿತಗೊಳಿಸಲಾಗಿತ್ತು. ಈ ಅಶಾಂತಿ ರಾಜ್ಯದ ಮೇಲೆ ಕರಿನೆರಳು ಬೀರಿತ್ತು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, “ಹಿಂಸೆಯಿಂದ ಬಳಲಿದ ಈ ಪ್ರದೇಶದಲ್ಲಿ ಹೊಸ ಭರವಸೆಯ ಬೆಳಕು ಮೂಡುತ್ತಿದೆ” ಎಂದು ಜನತೆಗೆ ಧೈರ್ಯ ತುಂಬಿದರು.
ಅವರು ರಿಲೀಫ್ ಕ್ಯಾಂಪ್‌ಗಳಲ್ಲಿ ಆಶ್ರಯ ಪಡೆದವರನ್ನು ಭೇಟಿ ಮಾಡಿ ಅವರ ನೋವು ಹಂಚಿಕೊಂಡರು. “ಮಣಿಪುರವು ಭರವಸೆಯ ಭೂಮಿ, ಆಕಾಂಕ್ಷೆಯ ಭೂಮಿ.
ಹಿಂಸೆಯು ಈ ಸುಂದರ ನೆಲದ ಮೇಲೆ ಕರಿನೆರಳು ಚೆಲ್ಲಿದ್ದರೂ, ಮತ್ತೆ ಶಾಂತಿ ಸ್ಥಾಪನೆಯ ದಾರಿ ಕಾಣುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.ಮೋದಿ ಅವರು, “ಅಭಿವೃದ್ಧಿ ಬೇರೂರಬೇಕಾದರೆ ಶಾಂತಿ ಅಗತ್ಯ.
ಕಳೆದ 11 ವರ್ಷಗಳಲ್ಲಿ ಈಶಾನ್ಯದಲ್ಲಿ ಅನೇಕ ಸಂಘರ್ಷಗಳನ್ನು ಪರಿಹರಿಸಲು ಸರ್ಕಾರ ಯಶಸ್ವಿಯಾಗಿದೆ. ಹಲವು ಗುಂಪುಗಳೊಂದಿಗೆ ಒಪ್ಪಂದಗಳು ನೆರವೇರಿವೆ.
ಸಂವಾದ, ಗೌರವ ಮತ್ತು ಪರಸ್ಪರ ಅರಿವು ಮೂಲಕ ಶಾಂತಿ ಸಾಧಿಸಲು ನಾವು ಬದ್ಧರಾಗಿದ್ದೇವೆ” ಎಂದು ಒತ್ತಿ ಹೇಳಿದರು.
ಇಂಫಾಲ್‌ನಲ್ಲಿ ಹೊಸ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು, ರೈಲು ಸಂಪರ್ಕ ಸೇರಿದಂತೆ ಹಲವಾರು ಮೂಲಸೌಕರ್ಯ ಯೋಜನೆಗಳ ಬಗ್ಗೆ ಮೋದಿ ಉಲ್ಲೇಖಿಸಿದರು.
ಜಿರಿಬಮ್–ಇಂಫಾಲ್ ರೈಲ್ವೆ ಯೋಜನೆ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಉತ್ತಮ ರಸ್ತೆ ಸಂಪರ್ಕ ಇತ್ಯಾದಿ ಮೂಲಕ ಮಣಿಪುರವನ್ನು ಭಾರತದ ಉಳಿದ ಭಾಗಗಳೊಂದಿಗೆ ಜೋಡಿಸುವ ಕನಸನ್ನು ಹಂಚಿಕೊಂಡರು.
ಅವರು, ಇಂದು ದೆಹಲಿಯಲ್ಲಿ(Delhi) ತೆಗೆದುಕೊಳ್ಳುವ ನಿರ್ಧಾರಗಳು ಮಣಿಪುರಕ್ಕೂ ತಲುಪುತ್ತಿವೆ. ಹಿಂದೆ ದಶಕಗಳ ಕಾಲ ಬೇಕಾಗುತ್ತಿತ್ತು. ಮಣಿಪುರ ಈಗ ದೇಶದ ಪ್ರಗತಿಯೊಂದಿಗೆ ಹೆಜ್ಜೆ ಹಾಕುತ್ತಿದೆ.
ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, ಅದರಲ್ಲಿ ಮಣಿಪುರಕ್ಕೂ ಪಾಲು ಇದೆ ಎಂದು ಹೇಳಿದರು. ಕೇಂದ್ರ ಸರ್ಕಾರ(Central Govt) ಬಡವರಿಗೆ ಪಕ್ಕಾ ಮನೆಗಳ ಯೋಜನೆ
ಘೋಷಿಸಿರುವುದರ ಪ್ರಯೋಜನ ಮಣಿಪುರಕ್ಕೂ ದೊರೆತಿದೆ ಎಂದು ಮೋದಿ ತಿಳಿಸಿದರು.ಮಣಿಪುರದಲ್ಲಿ ಶಾಂತಿ ನೆಲೆಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ನಿಮ್ಮ ಕನಸುಗಳನ್ನು ಈಡೇರಿಸಲು,
ಇದನ್ನು ಓದಿ : ಕುಟುಂಬ ರಾಜಕೀಯದಲ್ಲಿ ಕರ್ನಾಟಕಕ್ಕೆ 4 ನೆಯ ಸ್ಥಾನ : ಉತ್ತರ ಪ್ರದೇಶ ಪ್ರಥಮ
ಮಣಿಪುರವನ್ನು ಭರವಸೆಯ ಹಾದಿಯಲ್ಲಿ ಕೊಂಡೊಯ್ಯಲು ನಾನು ನಿಮ್ಮೊಂದಿಗಿದ್ದೇನೆ. ಭಾರತ ಸರ್ಕಾರವು ಮಣಿಪುರದ ಜನರೊಂದಿಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ. (PM Narendra Modi visits Manipur)