ರಾಶಿ ರಾಶಿ ಸತ್ತು ಬಿದ್ದಿರುವ ಮೀನುಗಳು……… ವಿಷ ನೀರು ಹರಿದು ಬಂಜರಾಗಿರೋ ಕೃಷಿ ಭೂಮಿ………. ಅಪಾಯಕಾರಿ ರಾಸಾಯನಿಕ ವಸ್ತು ಸೇರಿರುವ ನೀರು ಹರಿದು ಕೊಳೆತು ನಾರುತ್ತಿರುವ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು. ಸಂಪದ್ಭರಿತ ಭೂಮಿ ಸರ್ವನಾಶವಾಗಿರೋದನ್ನ ಕಂಡು ಕಣ್ಣೀರಿಡುತ್ತಿರೋ ರೈತ…
ಇದು ರಾಯಚೂರು ತಾಲೂಕಿನ ಚಿಕ್ಕಸಗೂರು ಕೈಗಾರಿಕಾ ವಲಯದ ಸುತ್ತಮುತ್ತಲು ಕಂಡು ಬರುತ್ತಿರುವ ಕರಾಳ ದೃಶ್ಯಗಳು. ಈ ಭಯಾನಕತೆಗೆ ಕಾರಣ ಏನು ಗೊತ್ತಾ? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿಗಳ ಲಂಚಬಾಕತನ, ಪರಿಸರ ಇಲಾಖೆಯವರ ನಿರ್ಲಕ್ಷ್ಯತನ. ಭ್ರಷ್ಟ ರಾಜಕಾರಣಿಗಳ ಕುಮ್ಮಕ್ಕು. ಯಸ್, ರಾಯಚೂರಿನ ಚಿಕ್ಕಸಗೂರು ಕೈಗಾರಿಕಾ ವಲಯದಲ್ಲಿರುವ ಹದಿನೈದಕ್ಕೂ ಹೆಚ್ಚು ಫಾರ್ಮ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಆದ್ರೆ ಈ ಕಂಪೆನಿಗಳು ಕೈಗಾರಿಕಾ ನಿಯಮಗಳನ್ನು ಪಾಲಿಸುತ್ತಿದ್ದಿದ್ರೆ ಇಂಥಾ ಅನಾಹುತಗಳು ಆಗ್ತಿರಲಿಲ್ಲ. ಆದ್ರೆ ಇಲ್ಲಿನ ಫಾರ್ಮಾ ಕಂಪೆನಿಗಳು ಕಾನೂನನ್ನು ಕಾಲ ಕಸ ಮಾಡಿ, ಕಂಪೆನಿಯಿಂದ ಹೊರ ಬರುವ ಅತ್ಯಂತ ಅಪಾಯಕಾರಿ ವಿಷಕಾರಿ ತ್ಯಾಜ್ಯವನ್ನು ನೇರವಾಗಿ ಕೆರೆ, ಹಳ್ಳ, ಕೊಳ್ಳ, ಹೊಲ ಗದ್ದೆಗಳಿಗೆ ಬಿಡುತ್ತಿವೆ.
ಕಂಪೆನಿಗಳು ರಾತ್ರಿ ಹೊತ್ತು ಕದ್ದುಮುಚ್ಚಿ ವಿಷ ತ್ಯಾಜ್ಯವನ್ನು ಸಂಸ್ಕರಿಸದೆ ಕೊಳವೆ ಮೂಲಕ ಹೊರಗೆ ಬಿಡುತ್ತಿದ್ದಾರೆ. ಇದಕ್ಕೆ ಪೂರಕವಾದ ಸಾಕ್ಷಿ ವಿಜಯಟೈಮ್ಸ್ನ ಸಿಟಿಜನ್ ಜರ್ನಲಿಸ್ಟ್ ಬಾಬು ಅವರಿಗೆ ಸಿಕ್ಕಿದೆ.
ಕೊಳವೆ ಮೂಲಕ ಮಾತ್ರವಲ್ಲ ಟ್ಯಾಂಕರ್ಗಳ ಮೂಲಕವೂ ತ್ಯಾಜ್ಯವನ್ನು ತೆಗೆದುಕೊಂಡು ಹೋಗಿ ರೈತರ ಹೊಲ ಗದ್ದೆಗಳಿಗೆ, ಕೆರೆಗಳಿಗೆ ಹರಿಸುತ್ತಿದ್ದಾರೆ. ಈ ವಿಷ ನೀರು ಭೂಮಿಗೆ ಸೇರಿ ಅಂತರ್ಜಲ ವಿಷಮಯವಾಗಿದೆ. ಕೃಷಿ ಸರ್ವನಾಶವಾಗಿದೆ. ರೈತರು ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದೊದಗಿದೆ.
ಇಷ್ಟೆಲ್ಲ ಕರ್ಮಕಾಂಡ ಆಗ್ತಾ ಇದ್ರೂ ಸಂಬಂಧಪಟ್ಟ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಕ್ರಮ ಎಸಗುತ್ತಿರುವ ಕಾರ್ಖಾನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮಸ್ಥರು ದೂರು ಕೊಟ್ರೂ ಕ್ಯಾರೇ ಅನ್ನದ ಅಧಿಕಾರಿಗಳ ಮೇಲೆ ಅನುಮಾನ ಕಾಡಲಾರಂಭಿಸಿದೆ.
ಚಿಕ್ಕಸಗೂರು ಗ್ರಾಮದ ಜನರ ಪ್ರಾಣ ಹಿಂಡುತ್ತಿರುವ ಈ ಫಾರ್ಮಾ ಕಂಪೆನಿಗಳೆಲ್ಲಾ ನೆರೆಯ ಆಂಧ್ರಪ್ರದೇಶದ ಉದ್ಯಮಿಗಳಿಗೆ ಸೇರಿರುವಂಥಹದ್ದು. ಇಂಥಾ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಮಾಲಿನ್ಯ ಅಧಿಕಾರಿಗಳಿಗೆ ಇಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ಈ ಫಾರ್ಮಾ ಕಂಪೆನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲಿನ ಜನ ಜಾನುವಾರುಗಳನ್ನು ರಕ್ಷಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಚಿಕ್ಕಸಗೂರಿನಿಂದ ಬಾಬು ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್