Visit Channel

ನಟಿ `ಪೂರ್ಣ ಪ್ರಕರಣ’ದ ಸಂಪೂರ್ಣ ವೃತ್ತಾಂತ

WhatsApp Image 2020-07-14 at 10.44.32

ದಶಕದ ಹಿಂದೆ `ಜೋಶ್’ ಚಿತ್ರದ ಮೂಲಕ ಕನ್ನಡದ ನಾಯಕಿಯಾಗಿ ಗುರುತಿಸಕೊಂಡವರು ಪೂರ್ಣ. ಮೂಲತಃ ಮಲಯಾಳಿಯಾಗಿರುವ ಅವರ ನಿಜವಾದ ಹೆಸರು  ಷಂನಾ ಖಾಸಿಂ.  ಪ್ರಸ್ತುತ ರಮೇಶ್ ಅರವಿಂದ್ ಅವರ `100′ ಎನ್ನುವ ಚಿತ್ರದಲ್ಲಿ ನಟಿಸುತ್ತಿರುವ ಪೂರ್ಣ ಇದೀಗ ಅವರ ತಾಯ್ನಾಡಾದ ಕೇರಳದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದಾರೆ. ಆದರೆ ಈಗ ಸುದ್ದಿಯಾಗಿರುವುದು ಸಿನಿಮಾ ವಿಚಾರಕ್ಕಾಗಿಯಲ್ಲ. ತಮ್ಮನ್ನು ಟ್ರ್ಯಾಪ್ ಮಾಡಲು ಬಂದ ಒಂದು ಅಂತಾರಾರಷ್ಟ್ರೀಯ ಮಟ್ಟದ ವಂಚಕರ ಜಾಲವನ್ನು ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದಕ್ಕೆ! ಹೌದು; ಎರಡು ವಾರಗಳ ಹಿಂದೆ ಪೂರ್ಣ ಪೊಲೀಸರಿಗೆ ನೀಡಿದ ಒಂದೇ ಒಂದು ದೂರು ಇದೀಗ ರಾಜ್ಯ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟದ ಹಗರಣವೊಂದನ್ನು ಬಯಲಿಗೆಳೆದಿದೆ.

ಪ್ರೀತಿ, ಪ್ರೇಮದ ಡ್ರಾಮ

ಪೂರ್ಣಳಿಗೆ ಪ್ರಸ್ತುತ ಸರಾಸರಿ ನಟಿಯರು ಮದುವೆಯಾಗುವ ವಯಸ್ಸು. ಅದಕ್ಕೆ ತಕ್ಕಂತೆ ಸಾಂಪ್ರದಾಯಿಕ ಮುಸಲ್ಮಾನರ ರೀತಿಯಲ್ಲೇ  ಕುಟುಂಬದಿಂದ ಸೂಕ್ತ ವರನಿಗಾಗಿ ಹುಡುಕಾಟವೂ ನಡೆದಿತ್ತು. ಈ ಸಂದರ್ಭದಲ್ಲಿ ಯುವಕನೋರ್ವ ಕರೆ ಮಾಡಿ ತನ್ನ ಸ್ನೇಹಿತ ಅನ್ವರ್‌ ಗೆ ಷಂನಾ ಖಾಸಿಂ (ಪೂರ್ಣ) ಎಂದರೆ ವಿಪರೀತ ಇಷ್ಟ. ನಿಮಗೆ ಒಪ್ಪಿಗೆಯಾದರೆ ಮನೆಯ ಕಡೆಯಿಂದ ಮನೆಯವರ ಜತೆಗೆ ಮಾತನಾಡಲು ತಿಳಿಸುವುದಾಗಿ ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಆ ಯುವಕನೂ ಪೂರ್ಣ ಜತೆಗೆ ಮಾತನಾಡಿದ್ದು, ತನ್ನದೊಂದು ಫೊಟೋವನ್ನು ಆಕೆಗೆ ವಾಟ್ಸ್ಯಾಪ್ ಮೂಲಕ ಕಳಿಸಿಕೊಟ್ಟಿದ್ದ. ಫೊಟೋ ನೋಡಿ ಮತ್ತು ಆತ ತನ್ನೊಂದಿಗೆ ಮಾತನಾಡಿದ ರೀತಿ ಮತ್ತು ಕುಟುಂಬದ ಹಿನ್ನೆಲೆಯ ಬಗ್ಗೆ ತಿಳಿದ ಪೂರ್ಣ ಈ ಬಗ್ಗೆ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು. ಆನಂತರ ಅದು ಎರಡು ಕುಟುಂಬಗಳ ನಡುವಿನ ಮಾತುಕತೆಯಾಗಿ ಮುಂದುವರಿದಿತ್ತು. ಅಂದರೆ ಅನ್ವರ್ ತಂದೆ, ಪೂರ್ಣಳ ತಂದೆಯೊಂದಿಗೆ ಮತ್ತು ಅನ್ವರ್ ನ ತಾಯಿ ಪೂರ್ಣಳ ತಾಯಿಯೊಂದಿಗೂ ಮಾತನಾಡಿದ್ದರು. ಕೆಲವೇ ದಿನಗಳಲ್ಲಿ ಕೊಚ್ಚಿಯಲ್ಲಿರುವ ಪೂರ್ಣಳ ಮನೆಗೆ ಮಾತುಕತೆಗೆ ಬರುವುದಾಗಿಯೂ ತಿಳಿಸಿದ್ದರು. ಆದರೆ ನಿಗದಿತ ದಿನಕ್ಕೂ ಮೊದಲೇ ತಮ್ಮ ಆಪ್ತ ಸಂಬಂಧಿಕರ ನಿಧನದ ಕಾರಣ ಬರಲಾಗುತ್ತಿಲ್ಲ ಎಂದು ತಿಳಿಸಿತ್ತು ಅನ್ವರ್ ಫ್ಯಾಮಿಲಿ. ಆದರೆ ಆ ದಿನ ಪೂರ್ಣಳ ಮನೆಯ ದಾರಿಯಲ್ಲಿ ಸಾಗಲಿರುವ ತಮ್ಮ ಮೂರು ಜನ ಸಂಬಂಧಿಕರು ಬರಬಹುದು ಎನ್ನುವ ಸೂಚನೆ ನೀಡಿದ್ದರು. ಅವರು ನೀಡಿದ ಮೂರು ಜನರ ಪಟ್ಟಿಯಲ್ಲಿ ಮಹಿಳೆಯೂ ಸೇರಿದ್ದರು. ಆದರೆ ಆ ದಿನ ಪೂರ್ಣಳ ಮನೆ ಮುಂದೆ ಬಂದು ನಿಂತಿದ್ದು ಐವರು ಹುಡುಗರು ಮಾತ್ರ! ಅದರಲ್ಲಿ ಅನ್ವರ್ ಕೂಡ ಇರಲಿಲ್ಲ!! ಈ ಬಗ್ಗೆ ಬಂದವರಲ್ಲಿ ವಿಚಾರಿಸಿದಾಗ ಮಹಿಳೆಗೆ ತಮ್ಮೊಂದಿಗೆ ಬರಲಾಗಲಿಲ್ಲವೆಂದು ಮತ್ತು ತಾವು ಮೂರು ಜನ ಸಂಬಂಧಿಕರಾಗಿದ್ದು ಉಳಿದ ಇಬ್ಬರು ಶರತ್ ಮತ್ತು ರಮೇಶ್ ಎನ್ನುವ ತಮ್ಮ ಡ್ರೈವರ್‌ಗಳು ಎಂದು ತಿಳಿಸಿದ್ದಾರೆ. ಇದು ಒಂದು ಖಾಸಗಿ ಭೇಟಿಯಾಗಿದ್ದ ಕಾರಣ ಆ ಇಬ್ಬರು ಚಾಲಕರಲ್ಲಿ ಮನೆಯಿಂದ ಹೊರಗೆ ನಿಲ್ಲುವಂತೆ ಸೂಚಿಸಲಾಗಿತ್ತು.

ಬಂದೇ ಬಿಟ್ಟಿತು ಸಂದೇಹ..!

ಈ ಘಟನೆ ನಡೆದ ಬಳಿಕ ನಟಿ ಪೂರ್ಣ  ಮತ್ತು ಮನೆಯವರಿಗೆ ಈ ಹುಡುಗನ ಕಡೆಯವರ ಬಗ್ಗೆ ಸಂದೇಹಗಳು ಸೃಷ್ಟಿಯಾಗಿದ್ದವು. ಅದಕ್ಕೆ ಕಾರಣ, ಅವರ ವರ್ತನೆಯೇ ಆಗಿತ್ತು! ಅಂದು ಮನೆಯಿಂದ ಹೊರಗೆ ಕಳಿಸಿದ್ದ ಇಬ್ಬರು ಯುವಕರ ಜತೆಗೆ ಮನೆಯ ಒಳಗೆ ಇದ್ದಂಥ  ಒಬ್ಬ ಯುವಕನೂ ಹೊರಗೆ ಹೋಗಿ ಸೇರಿಕೊಂಡಿದ್ದ. ಬಳಿಕ ಅವರು ಹೊರಗಡೆಯ ದೃಶ್ಯಗಳನ್ನು ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು. ಪೂರ್ಣಳ ವಾಹನದ ಫೊಟೋ ತೆಗೆದಿದ್ದರು. ಮಾತ್ರವಲ್ಲ, ತಮ್ಮನ್ನು ಸಿಸಿ ಕ್ಯಾಮೆರಾ ಸೆರೆ ಹಿಡಿಯುತ್ತಿದೆ ಎನ್ನುವ ಸತ್ಯ ಅರಿತಾಗ ಒಮ್ಮೆಲೆ ಅದರಿಂದ ತಮ್ಮ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿದ್ದರು! ತಕ್ಷಣ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ತಾವು ಟಿಕ್ ಟಾಕ್ ಮಾಡಲು ಲೊಕೇಶನ್ ಹುಡುಕುತ್ತಿದ್ದುದಾಗಿ ಹೇಳಿದ್ದರು. ಒಟ್ಟಿನಲ್ಲಿ ಬಂದವರ ವರ್ತನೆ ಇಷ್ಟವಾಗದೇ ದಬಾಯಿಸುವ ರೀತಿಯಲ್ಲೇ ಅವರನ್ನು ವಾಪಾಸು ಕಳಿಸಿತ್ತು ಪೂರ್ಣಾಳ ಕುಟುಂಬ.

ವಿನಂತಿಯ ಬಳಿಕ ಬೆದರಿಕೆಯ ಧ್ವನಿ

ಘಟನೆಯ ಬಗ್ಗೆ ಯೋಚಿಸಿದಷ್ಟು ಪೂರ್ಣಾಳಿಗೆ  ಸಂದೇಹ ಹೆಚ್ಚಲು ಶುರುವಾಯಿತು. ಯಾಕೆಂದರೆ ಆಪ್ತ ಬಂಧುವಿನ ಮರಣದ ಮನೆಯಲ್ಲಿರುವುದಾಗಿ ಹೇಳಿದ್ದ ಅನ್ವರ್, ಆದಿನ ಮಾತನಾಡುವುದರ ಮಧ್ಯೆ ಒಂದು ಕ್ಷಣದ ಹೊಂದಾಣಿಕೆಗಾಗಿ ಒಂದು ಲಕ್ಷ ಮೊತ್ತವನ್ನು ಕೊಡಬಹುದೇ ಎಂದು ವಿನಂತಿಸಿದ್ದರು.  ಬಿಸ್ನೆಸ್ ಮ್ಯಾನ್ ಎಂದು ಹೇಳುವ ಅನ್ವರನಿಗೆ ಮದುವೆಯ ಮಾತುಕತೆ ನಡೆಸಿದಂಥ ಹುಡುಗಿಯಲ್ಲೇ ಹಣ ಕೇಳಬೇಕಾದ ಪರಿಸ್ಥಿತಿ ಬಂದಿದೆ ಎನ್ನುವುದನ್ನು ಆಕೆ ನಂಬಿರಲಿಲ್ಲ. ಇದೀಗ ಮನೆಗೆ ಬಂದ ಹುಡುಗರ ವರ್ತನೆ ಮತ್ತು ಆ ಸಂದರ್ಭದಲ್ಲಿ ಅನ್ವರ್‌ನ ನಂಬರ್ ಸ್ವಿಚಾಫ್ ಆಗಿದ್ದಿದ್ದು ಎಲ್ಲವನ್ನು ಗಮನಿಸಿದಾಗ ಇದರಲ್ಲೇನೋ ಷಡ್ಯಂತ್ರ ಇರಬಹುದು ಎನ್ನುವ ಸಂದೇಹ ದಟ್ಟವಾಗಿತ್ತು. ಇವೆಲ್ಲದರ ಜತೆಗೆ ಅನ್ವರ್ ಇದು ತನಕ ಒಮ್ಮೆಯೂ ತನ್ನಲ್ಲಿ ವಿಡಯೋ ಕಾಲ್ ಮೂಲಕ ಮಾತನಾಡಲು ಒಪ್ಪಿರಲಿಲ್ಲ ಎನ್ನುವುದು ಕೂಡ ಸಂದೇಹಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು. ಒಮ್ಮೆ ಆತನೇ ವಿಡಿಯೋ ಕಾಲ್ ಮಾಡಿದ್ದಾಗಲೂ, ಆತ ಮುಖ ಕಾಣದಂತೆ ಕ್ಯಾಮೆರಾ ಮರೆ ಮಾಡಿದ್ದ. ಯಾಕೆ ಎಂದು ವಿಚಾರಿಸಿದಾಗ “ನಾನು ಹುಡುಗಿಯನ್ನು ಮೊದಲ ಬಾರಿ ತಾಯಿಯ ಜತೆಯಲ್ಲೇ ನೋಡುತ್ತೇನೆ ಎಂದು ತಾಯಿಗೆ ಮಾತು ನೀಡಿದ್ದೇನೆ” ಎಂದಿದ್ದ. ಅದನ್ನು ಸಮರ್ಥಿಸಿ ಪೂರ್ಣಳ ಜತೆಗೆ ಆತನ ತಾಯಿಯೂ ಮಾತನಾಡಿದ್ದರು! ಇವನ್ನೆಲ್ಲ ಮತ್ತೊಮ್ಮೆ ಯೋಚಿಸಿದಾಗ ಇವರೆಲ್ಲ ಸೇರಿ ಏನೋ ಜಾಲ ಹೆಣೆದಿರಬಹುದು ಎನ್ನುವ  ಅನುಮಾನ ದಟ್ಟವಾಗಿತ್ತು. ಹಾಗಾಗಿ  ಪೂರ್ಣ ತನ್ನ ಆತ್ಮೀಯ ಬಂಧುವಿಗೆ ಅನ್ವರನ ಫೊಟೋವನ್ನು ಕಳಿಸಿಕೊಟ್ಟರು. ಆತ ತಕ್ಷಣವೇ ಈತ ತನಗೆ ಟಿಕ್ಟಾಕ್ ವಿಡಿಯೋಗಳ ಮೂಲಕ ಪರಿಚಯವೆಂದೂ ಈತನ ಹೆಸರು ಅನ್ವರ್ ಅಲ್ಲವೆಂದೂ ತಿಳಿಸಿದ. ಕೂಡಲೇ ಆ ಟಿಕ್ಟಾಕ್ ಹುಡುಗನನ್ನು ಸಂಪರ್ಕಿಸಲಾಯಿತು. ಆದರೆ ಆತನ ತನಗೆ ಈ ಘಟನೆಯ ಬಗ್ಗೆ ಅರಿವಿಲ್ಲ. ಯಾರೋ ನನ್ನ ಫೊಟೋ ಬಳಸಿರಬಹುದು ಎನ್ನುವುದನ್ನು ಆತ ಪೂರ್ಣಳಿಗೆ ವಿವರಿಸಿದ. ಇದರ ನಡುವೆ ಅನ್ವರ್ ತಾವು ಮೋಸಗಾರರಲ್ಲವೆಂದು ದಯವಿಟ್ಟು ಮಾತನಾಡುವಂತೆ ವಿನಂತಿಸಿ ಪದೇ ಪದೆ ಸಂದೇಶ ಕಳಿಸುತ್ತಿದ್ದ. ಆತನಿಗೆ ಮೊದಲ ರಿಪ್ಲೈ ಆಗಿ ಟಿಕ್ಟಾಕ್ ಹುಡುಗನ ಬೇರೆ ಫೊಟೋವನ್ನು ಕಳಿಸಿ ಕೊಟ್ಟು ಸುಮ್ಮನಾದರು ಪೂರ್ಣ. ತಮ್ಮ ಸುಳ್ಳು ಹೊರಬಿತ್ತೆನ್ನುವ ಅರಿವಾದೊಡನೆ ಅನ್ವರ್ ಮಾತುಗಳ ರೀತಿಯೇ ಬದಲಾಗಿತ್ತು. “ನೀನು ಇದುವರೆಗೆ ನಡೆದ ವಿಚಾರಗಳನ್ನೆಲ್ಲ ಮರೆತರೆ ನಿನಗೆ ಒಳಿತು. ಇಲ್ಲವಾದರೆ ಇದುವರೆಗೆ ನನ್ನ ಜತೆ ಮಾತನಾಡಿದ್ದೆಲ್ಲವೂ ರೆಕಾರ್ಡ್ ಆಗಿದೆ. ನಿನ್ನ ಮನೆಗೆ ಹೆಣ್ಣು ನೋಡಲು ಬಂದ ಎಲ್ಲ ಘಟನೆಯನ್ನು ಸೇರಿಸಿ ನಾನೇ ಸೋಶಿಯಲ್ ಮೀಡಿಯಾಗಳ ಮೂಲಕ ಹರಿಬಿಡುತ್ತೇನೆ” ಎಂದು ಬೆದರಿಕೆಯ ವಾಯ್ಸ್ ಮೆಸೇಜ್ ಕಳಿಸಿದ್ದ. ಆದರೆ ಪರಿಚಯವಾಗಿದ್ದೇ ವಾರದ ಹಿಂದೆ. ಆತನೊಂದಿಗೆ ಅಂಥ ಖಾಸಗಿ ವಿಚಾರಗಳನ್ನೇನೂ ಹಂಚಿಕೊಂಡಿಲ್ಲ. ಇಂಥ ಸಂದರ್ಭದಲ್ಲಿ ಆತನಿಗೆ ಬ್ಲ್ಯಾಕ್ಮೇಲ್ ಮಾಡುವುದಕ್ಕೇನೂ ಇಲ್ಲ. ತಾನೇ ಪೊಲೀಸ್ ಕಂಪ್ಲೇಂಟ್ ನೀಡುವುದು ಉತ್ತಮ ಎನ್ನುವ ಗಟ್ಟಿ ನಿರ್ಧಾರ ಮಾಡಿದ್ದಾರೆ ಪೂರ್ಣಾ.

ಸಿಕ್ಕಿ ಬಿದ್ದರು ಖದೀಮರು

ಪೂರ್ಣಾಳ ತಾಯಿ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಆಕೆಯ ಮನೆಗೆ ಬಂದಿದ್ದ ಅಶ್ರಫ್, ರಮೇಶ್, ಶರತ್, ರಫೀಕ್, ಬಕ್ಕರ್, ಅಬ್ದುಲ್ ಸಲಾಂ ಎನ್ನುವವರು ಸಿಕ್ಕಿಬಿದ್ದಿದ್ದರು. ಇವರಲ್ಲಿ ರಫೀಕ್ ಎನ್ನುವಾತನೇ ಅನ್ವರ್ ಹೆಸರಲ್ಲಿ ಪೂರ್ಣಾಳಿಗೆ ಫೋನ್ ಮಾಡಿದ್ದನೆನ್ನುವುದು ತಿಳಿದು ಬಂತು. ಮಾತ್ರವಲ್ಲ, ಈ ತಂಡವನ್ನು ಟಿವಿಯಲ್ಲಿ ಕಂಡ ನಟಿಯೋರ್ವಳು ಬಂಧಿತರನ್ನು ಇರಿಸಿದಂಥ ಪೊಲೀಸ್ ಸ್ಟೇಷನ್‌ಗೆ ಹೋಗಿ ಎರಡು ತಿಂಗಳ ಹಿಂದೆ ತಾನು ನೀಡಿದ ದೂರಿನಲ್ಲಿ ಇವರೇ ಅಪರಾಧಿಗಳು ಎಂದಳು. ತನ್ನ ಗುರುತನ್ನು ಖಾಸಗಿಯಾಗಿ ಇರಿಸಿಕೊಂಡು ಬಂದಿದ್ದ ಆ ನಟಿಯ ದೂರಿನ ಅನ್ವಯ ಆಕೆಯೊಂದಿಗೆ 15ಮಂದಿ ಯುವತಿಯರನ್ನು ಆಡಿಶನ್‌ಗೆ ಎಂದು ಕರೆಸಿ ಲಾಡ್ಜ್ ಒಂದರಲ್ಲಿ ಬಂಧಿಸಿ ಚಿನ್ನದ ಅಪಹರಣಕ್ಕೆ ಒತ್ತಡ ಹೇರಲಾಗಿತ್ತು! ಎಂಟು ದಿನಗಳ ಕಾಲ ಒಂದು ಹೊತ್ತಿನ ಆಹಾರವನ್ನಷ್ಟೇ ನೀಡಿ ಒತ್ತಡಕ್ಕೆ ಒಳಪಡಿಸಿದರೂ,  ಅವರು ಯಾರೂ ಮಣಿದಿರಲಿಲ್ಲ. ಕೊನೆಗೆ ಈ ವಿಚಾರ ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳಿಸಲಾಗಿತ್ತು. ಅಂಥ ಬೆದರಿಕೆ ಇದ್ದರೂ, ಬಿಡುಗಡೆಯಾದ ಇಬ್ಬರು ಯುವತಿಯರು ಮಾತ್ರ ಪೊಲೀಸರಿಗೆ ದೂರು ನೀಡಿದ್ದರು. ಪ್ರಸ್ತುತ ಪೂರ್ಣ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರಿಗೆ ಚಿನ್ನ ಅಪಹರಿಸುವ ಜಾಲವೊಂದು ಬಲೆಗೆ ಬಿದ್ದಿತ್ತು. ಅವರು ಈಗಾಗಲೇ ಕೇರಳದ ಒಂದಷ್ಟು ಕಲಾವಿದರಿಗೆ ಫೋನ್ ಮಾಡಿ ವಿದೇಶದಿಂದ ಮರಳುವಾಗ ಭಾರತಕ್ಕೆ ಚಿನ್ನ ಸಾಗಿಸಬಹುದೇ ಎಂದು ಆಫರ್ ನೀಡಿದ್ದು ಕೂಡ ಬೆಳಕಿಗೆ ಬಂದಿತು! ಇವರಿಗೆ ತಾರೆಯರ ಫೋನ್ ಸಂಪರ್ಕ ಸಂಖ್ಯೆಯನ್ನು ಒದಗಿಸಿದ ಪ್ರೊಡಕ್ಷನ್ ಕಂಟ್ರೋಲರ್ ಒಬ್ಬರಿಗೆ ಸೇರಿದಂತೆ ಎಲ್ಲರಿಗೂ ತಾರೆಯರ ಖಾಸಗಿ ಮೊಬೈಲ್ ನಂಬರ್ ಯಾರಿಗೂ ಹಂಚದಂತೆ `ಫೆಫ್ಕಾ'(film Employees federation of Kerala)ಆದೇಶ ನೀಡಿತು. ಈ ಎಲ್ಲ ವ್ಯವಹಾರದ ಹಿಂದೆ ಪಾಲಕ್ಕಾಡ್ ನೂರಾಣಿ ಷರೀಫ್ ಇರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿತ್ತು.

ಕ್ಲೈಮ್ಯಾಕ್ಸ್ ಬಾಕಿ ಇದೆ..!

ಕೇರಳದಲ್ಲಿ ನಡೆದ ಚಿನ್ನ ಸಾಗಾಟದ ಪ್ರಮುಖ ರೂವಾರಿಯಾಗಿ `ಡೀಲ್ ಲೇಡಿ’ಯೋರ್ವಳು ಇರುವುದಾಗಿ ಸ್ಪಷ್ಟವಾಯಿತು. ಅದು ದುಬೈನಲ್ಲಿ  ಯುಎಇ ದೂತಾವಾಸದಲ್ಲಿ ಕೌನ್ಸಿಲ್ ಜನರಲ್ ನ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಸುರೇಶ್ ಎನ್ನುವುದು ಬೆಳಕಿಗೆ ಬಂತು. ಆಕೆ ಪ್ರಸ್ತುತ ಕೇರಳದಲ್ಲೇ ಇರುವುದು ಅರಿತು ಆಕೆಯ ಬೇಟೆ ಆರಂಭವಾಯಿತು. ಆಕೆಯೊಂದಿಗೆ ಕೇರಳದ ಇಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಮಿನಿಸ್ಟರ್ ಎಂ ಶಿವಶಂಕರ್ ಸಂಪರ್ಕ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಈಗಾಗಲೇ ಅವರ ರಾಜೀನಾಮೆ ಪಡೆಯಲಾಯಿತು. ಅರೆಬಿಕ್ ಸೇರಿದಂತೆ ಹಲವಾರು ಭಾಷೆಗಳನ್ನು ಚೆನ್ನಾಗಿ ಮಾತನಾಡಬಲ್ಲ ಸ್ವಪ್ನಾ ಸಹಜವಾಗಿಯೇ ಯುಎಇಯ ಗಣ್ಯರ ಕೇರಳ ಭೇಟಿಯ ವೇಳೆ ಅವರೊಂದಿಗಿದ್ದು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯ ಜತೆಯಲ್ಲಿಯೂ ಕಾಣಿಸಿಕೊಂಡಿದ್ದರು. ಆ ಫೊಟೋಗಳನ್ನು ಈಗ ವೈರಲ್ ಮಾಡಿದ ವಿರೋಧ ಪಕ್ಷಗಳು ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಡ ಹಾಕಿದವು. ಆದರೆ ಪ್ರಕರಣವನ್ನು ಎನ್ ಐ ಎ(National Investigation Agency)ಗೆ ಹಸ್ತಾಂತರ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು ಕೇಂದ್ರದಿಂದ ಮಾಡಬೇಕಾಗಿರುವ ತನಿಖೆಯಾಗಿದ್ದು, ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಕೇರಳದಿಂದ ಪರಾರಿಯಾಗಿದ್ದ ಸ್ವಪ್ನಾಳನ್ನು ಬೆಂಗಳೂರಿನಲ್ಲಿ ಎನ್ ಐ ಎ ಬಂಧಿಸಿದೆ. ಆಕೆಯ ತನಿಖೆಯ ಬಳಿಕ ಹೆಚ್ಚಿನ ಮಾಹಿತಿಗಳು ಹೊರಗೆ ಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ನಟಿ ಪೂರ್ಣಳನ್ನು ಮದುವೆ ವಿಚಾರದ  ಮೂಲಕ ಟ್ರ್ಯಾಪ್ ಮಾಡಿ, ಬ್ಲ್ಯಾಕ್ಮೇಲ್ ನಡೆಸಲು ಪ್ರಯತ್ನಿಸಿದ ತಂಡ ಪೂರ್ಣಾಳ ಸಮಯೋಚಿತ ನಿರ್ಧಾರದಿಂದ ದೊಡ್ಡ ಮಟ್ಟದಲ್ಲಿ ಖೆಡ್ಡಾ ಸೇರಿಕೊಂಡಿದೆ. ಈ ಬಗ್ಗೆ ಪೂರ್ಣಾಳ ಜತೆಗೆ `ವಿಜಯ್ ಟೈಮ್ಸ್’ ಮಾತನಾಡಲು ಪ್ರಯತ್ನಿಸಿದಾಗ ಅವರು ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ಸದ್ಯಕ್ಕೆ ತಾವು ಯಾವುದೇ ಅಭಿಪ್ರಾಯಗಳನ್ನು ಹೇಳುವುದಿಲ್ಲ ಎಂದಿದ್ದಾರೆ. ಮುಂದಿನ ದಿನಗಳು ಸ್ವಪ್ನಾ ಸುರೇಶ್ ಬೆಂಬಲಕ್ಕೆ ನಿಂತ ಇನ್ನಷ್ಟು ಮಂದಿಯ ಹೆಸರು ಹೊರಬರುವುದನ್ನು ನಿರೀಕ್ಷಿಸಲಾಗುತ್ತಿದೆ.

ಶಶಿಕರ ಪಾತೂರು

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.