Pune: ಇಬ್ಬರು ಸಾಫ್ಟ್ವೇರ್ ಉದ್ಯೋಗಿಗಳ (Software Employees) ಸಾವಿಗೆ ಕಾರಣವಾದ ಪುಣೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. 17 ವರ್ಷದ ಬಾಲಕನ ರಕ್ತ ಪರೀಕ್ಷೆ ವರದಿಯನ್ನು ತಿರುಚಿದ ಆರೋಪದಲ್ಲಿ ಸಾಸೂನ್ ಸರ್ಕಾರಿ ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಮತ್ತು ಇನ್ನೊಬ್ಬ ವೈದ್ಯನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಅಪಘಾತದ ನಡೆದ ಮೇ (May) 19ರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ಬಾಲಾರೋಪಿಯನ್ನು ಸಾಸೂನ್ ಆಸ್ಪತ್ರೆ (Sassoon Hospital)ಗೆ ಕರೆದುಕೊಂಡು ಹೋಗಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ಆತನ ದೇಹದಲ್ಲಿ ಮದ್ಯದ ಅಂಶ ಇದೆಯೇ ಎಂದು ಖಚಿತಪಡಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಆದರೆ ಅಪ್ರಾಪ್ತ ವಯಸ್ಕನಿಂದ ಸಂಗ್ರಹಿಸಿದ ರಕ್ತದ ಮಾದರಿಯನ್ನು ವೈದ್ಯರು ಕಸದಬುಟ್ಟಿಗೆ ಎಸೆದಿದ್ದರು. ಅದರ ಬದಲು ಬೇರೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ಇರಿಸಿದ್ದರು ಎಂದು ಪುಣೆ ಪೊಲೀಸ್ (Pune Police) ಅಧಿಕಾರಿ ತಿಳಿಸಿದ್ದಾರೆ.
ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಅತುಲ್ ಘಟಕಾಂಬಳೆ ಎಂಬ ಪ್ಯೂನ್ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್ ಆಸ್ಪತ್ರೆಯ ಡಾ. ಅಜಯ್ ತವಾಡೆ (Dr. Ajay Tavade) ಮತ್ತು ಡಾ. ಹರಿ ಹಾರ್ನರ್ (Dr. Hari Horner) ಅವರನ್ನು ಪುಣೆ ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.
ಇನ್ನು ಈ ಪ್ರಕರಣದ ಸಮಗ್ರ ತನಿಖೆ ನಡೆಸಲು ಮೂವರು ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ತಂದೆ ಹಾಗೂ ಅಜ್ಜನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.