ನವದೆಹಲಿ, ಜು. 13: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್) ಸೆಪ್ಟೆಂಬರ್ 12ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ತಿಳಿಸಿದ್ದಾರೆ.
ಈ ಹಿಂದೆ ಆಗಸ್ಟ್ 1ರಂದು ಪರೀಕ್ಷೆ ನಿಗದಿಯಾಗಿತ್ತು. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವರು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ದೇಶದಾದ್ಯಂತ ‘ನೀಟ್-ಯುಜಿ 2021’ ಪರೀಕ್ಷೆಯು ಸೆಪ್ಟೆಂಬರ್ 12ರಂದು ನಡೆಯಲಿದೆ. ಅರ್ಜಿ ಪ್ರಕ್ರಿಯೆ ಇಂದು (ಮಂಗಳವಾರ) ಸಂಜೆ 5 ಗಂಟೆಯಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವೆಬ್‌ಸೈಟ್ ಮೂಲಕ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
‘ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಒದಗಿಸಲಾಗುವುದು. ಪ್ರವೇಶ ಹಾಗೂ ನಿರ್ಗಮನದ ಸಮಯ, ಸಂಪರ್ಕ ರಹಿತ ನೋಂದಣಿ ಹಾಗೂ ಆಸನ ವ್ಯವಸ್ಥೆ, ಸ್ಯಾನಿಟೈಸೇಷನ್ ಸೇರಿದಂತೆ ಇತರೆ ನಿಬಂಧನೆಗಳನ್ನು ಖಚಿತಪಡಿಸಲಾಗುವುದು. ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ 155ರ ಬದಲು 198 ನಗರಗಳಲ್ಲಿ ಪರೀಕ್ಷೆ ಆಯೋಜಿಸಲಾಗುವುದು. ಹಾಗೆಯೇ ಪರೀಕ್ಷಾ ಕೇಂದ್ರಗಳನ್ನು 3,862ಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು.