ನಿಮ್ಮ ಸ್ಕಿನ್ ರಕ್ಷಣೆಗೆ ರಾಸಾಯನಿಕ ಯುಕ್ತ ಉತ್ಪನ್ನಗಳಿಗಿಂತ ನೈಸರ್ಗಿಕ ವಿಧಾನಗಳೇ ಹೆಚ್ಚು ಪ್ರಯೋಜನಕಾರಿ ಹಾಗೂ ಆರೋಗ್ಯಕಾರಿ. ಫಲಿತಾಂಶ ತಡವಾಗಬಹುದು, ಆದರೆ ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆದರೆ ಯಾವ ಪದಾರ್ಥ, ಯಾವ ಸಮಸ್ಯೆಗೆ ಬಳಸಬೇಕೆಂಬುದು ಸರಿಯಾಗಿ ತಿಳಿದಿರಬೇಕಷ್ಟೇ. ಅದೇ ಸಾಲಿಗೆ ಸೇರುತ್ತೆ ಆಲೂಗಡ್ಡೆ.
ಆಲೂಗಡ್ಡೆ ಒಂದು ಚರ್ಮದ ಸಮಸ್ಯೆಗೆ ನೈಸರ್ಗಿಕ ಪರಿಹಾರವಾಗಿದ್ದು, ಅದ್ಭುತಗಳನ್ನು ಮಾಡುತ್ತದೆ. ಜರ್ನಲ್ ಆಫ್ ಮೆಡಿಸಿನಲ್ ಪ್ಲಾಂಟ್ಸ್ ಸ್ಟಡೀಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೇಯಿಸದ ಆಲೂಗಡ್ಡೆಯು ಪೊಟ್ಯಾಸಿಯಮ್, ಸಲ್ಫರ್, ರಂಜಕ ಮತ್ತು ಕ್ಲೋರೈಡ್ ಅನ್ನು ಹೊಂದಿರುತ್ತದೆ. ಇವೆಲ್ಲವೂ ಚರ್ಮಕ್ಕೆ ಪ್ರಯೋಜನಕಾರಿ. ಪೋಷಕಾಂಶ ದಟ್ಟವಾಗಿರುವ ಆಲೂಗಡ್ಡೆ ರಸವನ್ನು ಸೇವಿಸುವುದರಿಂದ, ನಿಮ್ಮ ದೇಹ ಹಾಗೂ ಚರ್ಮ ವ್ಯಾಪಕವಾದ ಪ್ರಯೋಜನಗಳನ್ನು ಪಡೆಯುತ್ತದೆ. ಹಾಗಾದ್ರೆ ಬನ್ನಿ, ಆಲೂಗಡ್ಡೆ ರಸದಿಂದ ನಿಮ್ಮ ಚರ್ಮಕ್ಕಾಗುವ ಪ್ರಯೋಜನಗಳನ್ನು ತಿಳಿಯೋಣ.
ಮೊದಲಿಗೆ ಆಲೂಗಡ್ಡೆ ರಸ ತಯಾರಿ ಹೇಗೆ ಎಂಬುದನ್ನು ನೋಡ್ಕೊಂಡು ಬರೋಣ:
ಆಲೂಗಡ್ಡೆ ಚೆನ್ನಾಗಿ ತೊಳೆದು, ಅದರ ಸಿಪ್ಪೆ ತೆಗೆದು, ತುರಿದುಕೊಳ್ಳಿ. ಈ ತುರಿದ ಆಲೂಗಡ್ಡೆಯನ್ನು ಲಿನಿನ್ ಬಟ್ಟೆಯ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ. ರಸವನ್ನು ಹಿಂಡಲು ನೀವು ಜ್ಯೂಸರ್ ಅನ್ನು ಸಹ ಬಳಸಬಹುದು. ತಕ್ಷಣ ಅದನ್ನು ಕುಡಿಯಿರಿ.
ಆಲೂಗಡ್ಡೆ ರಸದಿಂದ ಚರ್ಮಕ್ಕಾಗುವ ಪ್ರಯೋಜನಗಳು ಈ ಕೆಳಗಿನಂತಿದೆ:
ಒಣ ಚರ್ಮಕ್ಕೆ ಸಹಕಾರಿ:
ಆಲೂಗಡ್ಡೆ ರಸದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಶುಷ್ಕತೆಯನ್ನು ದೂರವಿರಿಸಲು ನೀವು ಒಂದು ಲೋಟ ಆಲೂಗೆಡ್ಡೆ ರಸವನ್ನು ಕುಡಿಯಬೇಕು. ನಿಮಗೆ ರಸ ಕುಡಿಯಲು ಆಗದಿದ್ದರೆ, ಹತ್ತಿ ಬಳಸಿ ಮುಖಕ್ಕೆ ಹಚ್ಚಬಹುದು.
ಕಪ್ಪು ಕಲೆಯನ್ನು ತೆಗೆದುಹಾಕುತ್ತದೆ:
ಮುಖದ ಮೇಲೆ ಕಪ್ಪು ಕಲೆಗಳಿವೆಯೇ? ಚಿಂತಿಸಬೇಡಿ, ಆಲೂಗೆಡ್ಡೆ ರಸವನ್ನು ಹಚ್ಚುವುದರಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ಆಲೂಗೆಡ್ಡೆ ರಸವನ್ನು ಹತ್ತಿಯ ಸಹಾಯದಿಂದ ಕಲೆಯಿರುವ ಜಾಗದ ಮೇಲೆ ಹಚ್ಚಿ. ಸ್ವಲ್ಪ ಸಮಯದವರೆಗೂ ಒಣಗಲು ಬಿಟ್ಟು, ಮುಖ ತೊಳೆಯಿರಿ. ವ್ಯತ್ಯಾಸವನ್ನು ನೋಡಲು ಪ್ರತಿ 3-4 ದಿನಗಳಿಗೊಮ್ಮೆ ಈ ವಿಧಾನವನ್ನು ಪುನರಾವರ್ತಿಸಿ.
ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ:
ನೀವು ನಿರೀಕ್ಷಿಸಿದ್ದಕ್ಕಿಂತ ಬೇಗ ವಯಸ್ಸಾಗುವಿಕೆಯ ಚಿಹ್ನೆಗಳು ಗೋಚರಿಸುತ್ತಿವೆಯಾ? ಆಲೂಗಡ್ಡೆ ರಸವು ವಯಸ್ಸಾಗುವಿಕೆಯನ್ನು ತಡೆಯಲು ಮತ್ತು ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಸ್ವಲ್ಪ ಆಲೂಗೆಡ್ಡೆ ರಸವನ್ನು ಬೆರೆಸಿ ಚಿಹ್ನೆಗಳಿರುವ ಜಾಗದ ಮೇಲೆ ಹಚ್ಚಿ. ಇದು ಸುಕ್ಕುಗಳ ನೋಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.
ಚರ್ಮದ ಅಲರ್ಜಿಯನ್ನು ನಿವಾರಿಸುತ್ತದೆ:
ನಿಮ್ಮ ಚರ್ಮವು ಉಬ್ಬಿರುವ, ತುರಿಕೆ, ಶುಷ್ಕ ಮತ್ತು ಒರಟಾಗಿರುವ ಎಸ್ಜಿಮಾದಂತಹ ಚರ್ಮ ಸಂಬಂಧಿ ಅಲರ್ಜಿಗಳಿಗೆ ಸಹಾಯ ಮಾಡುತ್ತದೆ. ಎಸ್ಜಿಮಾದ ರೋಗಲಕ್ಷಣಗಳನ್ನು ನಿವಾರಿಸಲು ಆಲೂಗಡ್ಡೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ನೀವು ಪ್ರತಿದಿನ ಒಂದು ಲೋಟ ಆಲೂಗೆಡ್ಡೆ ರಸವನ್ನು ಕುಡಿಯಬಹುದು ಅಥವಾ ಅಲರ್ಜಿ ಇರುವ ಜಾಗಕ್ಕೆ ಹಚ್ಚಬಹುದು. ಇಂತಹ ಸಮಯದಲ್ಲಿ ನಿಮ್ಮ ಚರ್ಮದ ಮೇಲೆ ಹೊಸ ವಿಷಯಗಳನ್ನು ಪ್ರಯತ್ನಿಸುವುದರೊಂದಿಗೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಆಲೂಗಡ್ಡೆ ರಸದಿಂದ ಅಡ್ಡಪರಿಣಾಮಗಳಿವೆಯೇ?
ಆಲೂಗೆಡ್ಡೆ ರಸವೂ ಕೆಲವು ಸಂದರ್ಭಗಳಲ್ಲಿ ಹಾನಿಕಾರಕವಾಗಿರುತ್ತದೆ. ಇದನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆನೋವು, ಅತಿಸಾರ ಮತ್ತು ವಾಂತಿಗೆ ಕಾರಣವಾಗುತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದು ಹೆಚ್ಚಿನ ಮಟ್ಟದ ಸಕ್ಕರೆಯನ್ನು ಸಹ ಹೊಂದಿರುವುದರಿಂದ ಮಧುಮೇಹ ಇರುವವರಿಗೆ ಒಳ್ಳೆಯದಲ್ಲ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಸಹ ಜಾಗರೂಕರಾಗಿರಬೇಕು ಮತ್ತು ರಸವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.