ಪವರ್ ಸ್ಟಾರ್(Powerstar) ಪುನೀತ್ ರಾಜ್ಕುಮಾರ್(Puneeth Rajkumar) ಅವರ ಬಹುನಿರೀಕ್ಷಿತ(Most Expected) ಚಿತ್ರ ಜೇಮ್ಸ್(James) ಇಂದು ದೇಶಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿದೆ.
ಕರ್ನಾಟಕ ರತ್ನ,(Karnataka Ratna) ಕನ್ನಡಿಗರ ಯುವರತ್ನ(Yuvarathna), ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಆರಾಧ್ಯದೈವ ಅಪ್ಪು(Appu) ಅವರ ಸಿನಿಮಾ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ರಾರಾಜಿಸುತ್ತಿದ್ದು, ಕನ್ನಡಿಗರಿಗೆ ಹಬ್ಬದೂಟ ಮುಂದಿಟ್ಟಷ್ಟು ಸಂತಸವಾಗಿದೆ.

ದೇಶಾದ್ಯಂತ ಏಕಕಾಲಕ್ಕೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡಿದೆ ಜೇಮ್ಸ್. ಒಂದೆಡೆ ಪವರ್ ಸ್ಟಾರ್ ಅಭಿಮಾನಿಗಳಿಗೆ ಜೇಮ್ಸ್ ಸಿನಿಮಾ ಖುಷಿ ತಂದರೆ, ಮತ್ತೊಂದೆಡೆ ಮಾರ್ಚ್ 17ನೇ ದಿನದಂದು ಅಪ್ಪು ಅವರ ಜನ್ಮದಿನ. ಈ ಎರಡು ವಿಶೇಷತೆಗಳು ಒಂದೇ ದಿನ ಲಭಿಸಿರುವುದು, ಅಭಿಮಾನಿಗಳಿಗೆ ವರ್ಷದ ಪ್ರಮುಖ ಹಬ್ಬಗಳು ಒಂದೇ ದಿನ ಬಂದಷ್ಟೇ ಖುಷಿಯಾಗಿದೆ.
ಬೆಳಗ್ಗಿನಿಂದ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಸಿನಿಮಾದ ಮೊದಲ ಪ್ರದರ್ಶನದಿಂದ ಇಲ್ಲಿಯವರೆಗೂ ಕಾಲೇಜು ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರು, ಆಟೋ ಚಾಲಕರು ಎಲ್ಲರೂ ಕೆಲಸ ಬಿಟ್ಟು ಚಿತ್ರಮಂದಿರಗಳತ್ತ ದೌಡಾಯಿಸಿ, ತಮ್ಮ ಹುಟ್ಟುಹಬ್ಬದಂತೆ ಚಿತ್ರಮಂದಿರಗಳ ಮುಂದೆ ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಹೊರೆತುಪಡಿಸಿದರೆ, ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಟಿಕೆಟ್ಗಳಿಗಾಗಿ ಜನರು ಮುಗಿಬಿದ್ದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ರಾಜ್ಯದ ನಾನಾ ಭಾಗಗಳಲ್ಲೂ ಅಪ್ಪು ಅವರ ಫೋಟೋ ಇಟ್ಟು, ಪೂಜೆ ಸಲ್ಲಿಸಿ, ಜನಸಾಮಾನ್ಯರಿಗೆ ಸಿಹಿ, ಅನ್ನ ಸಂತರ್ಪಣೆ ವಿತರಿಸಲಾಗುತ್ತಿದೆ. ಇದರ ಜೊತೆ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಅವರ ಹೆಸರಿನಲ್ಲಿ ಮೆರವಣಿಗೆ, ಸಂಕಲ್ಪಗಳು, ರತಕ್ತದಾನ ಶಿಬಿರ, ನೇತ್ರದಾನ ಮತ್ತು ಉಚಿತ ಅಗತ್ಯ ವಸ್ತುಗಳ ಸಂತರ್ಪಣೆಗಳ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದೆ. ಪವರ್ ಸ್ಟಾರ್ ಅಭಿನಯದ ಜೇಮ್ಸ್ ಸಿನಿಮಾ ಹೇಗಿದೆ? ಅಭಿಮಾನಿಗಳ ಪ್ರತಿಕ್ರಿಯೇ ಏನು? ತಿಳಿಯೋಣ ಮುಂದೇ ಓದಿ....
ಸಿನಿಮಾ ಪ್ರಾರಂಭದ ಮೊದಲೇ ಪವರ್ ಸ್ಟಾರ್ ಅವರಿಗೆ ನಮಿಸುವ ಮೂಲಕ ಸಿನಿಮಾ ಮುನ್ನುಗ್ಗುತ್ತದೆ. ಅಭಿಮಾನಿಗಳ ಆತುರ, ಕಾತುರತೆಗೆ ಹಂತ ಹಂತವಾಗಿ ಉತ್ತರ ನೀಡುವ ಸಿನಿಮಾ, ದೊಡ್ಡ ದಂಧೆಯ ವ್ಯವಹಾರ ಮಾಡುವವರ ಸುತ್ತ ಕಥೆ ಸುತ್ತುತ್ತದೆ. ಮೊದಲಿನಿಂದಲೂ ಕೊನೆಯವರೆಗೂ ಆಕ್ಷನ್ಗೆ ಹೆಚ್ಚು ಆದ್ಯತೆ ಕೊಟ್ಟಿದೆ ಚಿತ್ರತಂಡ ಎನ್ನಬಹುದು. ಪ್ರತಿಯೊಂದು ದೃಶ್ಯಾವಳಿ, ಸನ್ನಿವೇಶಗಳನ್ನು ಭಾರಿ ವೆಚ್ಚದಲ್ಲಿ ಚಿತ್ರಿಕರಿಸಲಾಗಿದೆ. ಅತೀ ರಿಚ್ನೆಸ್ನೊಂದಿಗೆ ಸಿನಿಮಾದ ಹಲವು ಭಾಗಗಳನ್ನು ಚಿತ್ರಿಸಿ, ಪ್ರೇಕ್ಷಕರ ಮುಂದೆ ಹಾಜರುಪಡಿಸಿದೆ.

ಅಪ್ಪು ಅವರ ಸಿನಿಮಾಗಳು ಕುಟುಂಬ ಸಮೇತ ವೀಕ್ಷಣೆಯ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಎಂದಿನಂತೆ ಮುಂದುವರೆಸಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ! ಇನ್ನು ಪ್ರಾರಂಭವಾದ 20 ನಿಮಿಷಗಳ ಕಾಲ ಪವರ್ ಸ್ಟಾರ್ ಎಂಟ್ರಿ ಯಾವಾಗ? ಎಂದು ಕಾಯುತ್ತಿದ್ದ ಅಭಿಮಾನಿಗಳ ಮುಂದೆ, ಪವರ್ ಫುಲ್ ಕಾರಿನ ಮಿಂಚಿನ ಓಟದಲ್ಲಿ ಪವರ್ ಸ್ಟಾರ್ ಎಂಟ್ರಿ ಕೊಡುತ್ತಾರೆ. “ಯಾರೋ ನೀನು” ಎಂದು ಕೇಳಿದಾಗ, ಪವರ್ ಸ್ಟಾರ್ ಅವರಿಂದ ಬರುವ ಮೊದಲ ಡೈಲಾಗ್ “ಜೇಮ್ಸ್ ಬಾಂಡ್” ಎಂದು.
ಈ ಒಂದು ಡೈಲಾಗ್ ಕೇಳಿದ ಮರುಕ್ಷಣವೇ ಅಭಿಮಾನಿಗಳ ದನಿಗಳು ಚಿತ್ರಮಂದಿರದಿಂದ ರಸ್ತೆಗೆ ತಲುಪಿತು. ಅಷ್ಟರ ಮಟ್ಟಿಗೆ ಅಪ್ಪು…..ಅಪ್ಪು… ಎಂದು ಕೂಗುವ ಮೂಲಕ ಪವರ್ ಸ್ಟಾರ್ ಅವರನ್ನು ಸ್ವಾಗತಿಸಿದರು ಪವರ್ ಫುಲ್ ಅಭಿಮಾನಿಗಳು. ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ ಪವರ್ ಸ್ಟಾರ್ ಅವರ ಕ್ಷಣಗಳು ಅಭಿಮಾನಿಗಳ ಕಣ್ಣಿನಲ್ಲಿ ಕಟ್ಟಿದಂತಿದೆ. ಪುನೀತ್ ರಾಜ್ಕುಮಾರ್ ಅವರ ಧ್ವನಿಯಲ್ಲಿ ನಮಗೆ ಸಿನಿಮಾ ಮೂಡಿಬರುವುದಿಲ್ಲ. ಅದು ಕೆಲ ಅಭಿಮಾನಿಗಳಿಗೆ ಬೇಸರ ತಂದ ವಿಷಯವಾದರೂ ಕೂಡ, ನಟ, ಸಹೋದರ ಶಿವರಾಜ್ಕುಮಾರ್ ಅವರು, ಪುನೀತ್ ಅವರಿಗೆ ಧ್ವನಿ ನೀಡಿರುವುದು ಖುಷಿತಂದಿದೆ.

ಮತ್ತಷ್ಟು ವಿಶೇಷವೆಂದರೆ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ನಲ್ಲಿ ಸಹೋದರರಾದ ರಾಘವೇಂದ್ರ ರಾಜ್ಕುಮಾರ್ ಮತ್ತು ಶಿವರಾಜ್ಕುಮಾರ್ ಅವರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಒಂದು ಸಂಗತಿ ಅಭಿಮಾನಿಗಳಿಗೆ ಮತ್ತಷ್ಟು ಆನಂದಿಸಿತು. ಪವರ್ ಸ್ಟಾರ್ಗೆ ನಾಯಕಿಯಾಗಿ ಸಾಥ್ ನೀಡಿರುವ ಪ್ರಿಯಾ ಆನಂದ್(Priya Anand) ನಿಜಕ್ಕೂ ನಾಯಕಿನಾ? ಅಥವಾ ನಾಯಕಿಯ ಪಾತ್ರದಲ್ಲಿರುವ ವಿಲನ್? ಎಂಬ ಗೊಂದಲ ಕಾಡುವುದಂತೂ ನಿಜ! ನಿರ್ದೇಶಕ, ಬರಹಗಾರ ಚೇತನ್ ಕುಮಾರ್(Chethan Kumar) ಅವರ ನಿರ್ದೇಶನ ಉತ್ತಮವಾಗಿದೆ. ಚಿತ್ರತಂಡದ ಶ್ರಮಕ್ಕೆ ಈಗಾಗಲೇ ಜನರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಸಂಪೂರ್ಣವಾಗಿ ಆಕ್ಷನ್ ಸಿನಿಮಾವಾಗಿ ಮೂಡಿಬಂದಿರುವ ಜೇಮ್ಸ್ ಸಿನಿಮಾದಲ್ಲಿ, ಅಪ್ಪು ಅವರ ಪಾತ್ರದ ವಿಶೇಷತೆ ಏನು? ಈ ಸಿನಿಮಾದ ಕಥಾಹಂದರವೇನು? ಸಿನಿಮಾದಲ್ಲಿ ಸಂದೇಶವೇನಿದೆ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಕಾಣಲು ಈ ಕೂಡಲೇ ನೀವು ಚಿತ್ರಮಂದಿರಕ್ಕೆ ಭೇಟಿ ನೀಡಿ ವೀಕ್ಷಿಸಬೇಕು ಎಂಬುದು ನನ್ನ ಮನವಿ. ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರ ಅದ್ಧೂರಿಯಾಗಿ ಸಾಗಲಿ, ಯಶಸ್ಸಿನ ಬುತ್ತಿ ಹೊರಲಿ ಎಂದು ಆಶಿಸೋಣ.

ನಗುವಿನ ಒಡೆಯ, ಹೃದಯ ಶ್ರೀಮಂತಿಕೆಯ ಸಾಹುಕಾರ, ಸರಳತೆಯ ಅಂದಗಾರ ಪವರ್ ಸ್ಟಾರ್ ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ, ಪ್ರೀತಿಸುವ ಕೋಟ್ಯಾಂತರ ಜೀವಗಳ ಉಸಿರು ನಿಲ್ಲುವವರೆಗೂ ಅಪ್ಪು ಎಂದೆಂದಿಗೂ ಜೀವಂತ! ಪ್ರತಿದಿನ, ಪ್ರತಿಕ್ಷಣ ಕನ್ನಡಿಗರಿಗೆ ಪ್ರೀತಿಯ ಅಪ್ಪು ಎಂಬ ಹೆಸರು ನಾಮಸ್ಮರಣೆಯಾಗಿ ಬೆರೆತುಹೋಗಿರುವುದು ಅಕ್ಷರಶಃ ಸತ್ಯ.
- ಮೋಹನ್ ಶೆಟ್ಟಿ