ಕನ್ನಡ(Kannada) ಚಿತ್ರನಟ(Actor) ಪುನೀತ್ ರಾಜಕುಮಾರ್(Puneeth Rajkumar) ಅವರ ಬದುಕಿನ ಕಥೆಯನ್ನು ಕರ್ನಾಟಕದ ೪ ಅಥವಾ ೫ನೇ ತರಗತಿಯ ಪಠ್ಯಪುಸ್ತಕದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಪುನೀತ್ ರಾಜಕುಮಾರ ಅವರು ಚಿತ್ರರಂಗದ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅನೇಕ ಸಾಮಾಜಿಕ ಸೇವೆಗಳನ್ನು ಯಾರಿಗೂ ತಿಳಿಯದಂತೆ ನಡೆಸುತ್ತಾ ಬಂದಿದ್ದರು.

ಮೈಸೂರಿನ ಶಕ್ತಿಧಾಮ ಸೇರಿದಂತೆ ನೂರಾರು ಅನಾಥ ಆಶ್ರಮ, ಗೋಶಾಲೆ, ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯಧನ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಈ ಎಲ್ಲ ಸೇವೆಗಳನ್ನು ತೆರೆಮರೆಯಲ್ಲೇ ಇದ್ದುಕೊಂಡು ನಡೆಸಿಕೊಂಡು ಬಂದಿದ್ದರು. ಪುನೀತ್ ಅವರ ಈ ಸೇವೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕೆಂದು ಕೆಲ ಸಂಘಸಂಸ್ಥೆಗಳು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೆ ಪತ್ರ ಬರೆದು ಒತ್ತಾಯಿಸಿವೆ. ಅದೇ ರೀತಿ ಬೆಂಗಳೂರು ದಕ್ಷಿಣ ಶಿಕ್ಷಣ ವಿಭಾಗದಲ್ಲಿಯೂ ಇದೆ ರೀತಿಯ ಒತ್ತಾಯ ಕೇಳಿಬಂದಿದೆ.
ಮುಂದಿನ ಪೀಳಿಗೆಗೆ ನಾವು ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ತಿಳಿಸಬೇಕಿದೆ. ಅವರ ಬದುಕು ಎಲ್ಲರಿಗೂ ಸ್ಪೂರ್ತಿಯಾಗಲಿದೆ. ವರನಟ ರಾಜಕುಮಾರ್ ಅವರ ಪುತ್ರನಾಗಿ ಜನಿಸಿ, ನಂತರ ದೊಡ್ಡ ಸ್ಟಾರ್ ನಟನಾಗಿ ಬೆಳೆದರು, ಅತ್ಯಂತ ಸರಳತೆಯಿಂದ ಪುನೀತ್ ರಾಜಕುಮಾರ್ ಬದುಕಿದರು. ಅನೇಕ ಸರ್ಕಾರಿ ಜಾಹೀರಾತುಗಳಿಗೆ ಸಂಭಾವನೆ ಪಡೆಯದೇ, ಸಾರ್ವಜನಿಕ ಹಿತದೃಷ್ಟಿಯ ಜಾಹೀರಾತುಗಳನ್ನು ಉಚಿತವಾಗಿ ಮಾಡಿದರು.
‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದಿಂದ ಬಂದ ಎಲ್ಲ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿಯೇ ವಿನಿಯೋಗಿಸಿದರು. ದೊಡ್ಡ ನಟನಾದರು ಎಲ್ಲರೊಂದಿಗೆ ಬೆರೆತು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಪುನೀತ್ ಅವರ ಈ ಬಣ್ಣದ ಬದುಕು ಅನೇಕರ ಬದುಕಿನ ಬೆಳಕಾಗಿದೆ. ಹೀಗಾಗಿ ಅವರ ಜೀವನಗಾಥೆಯನ್ನು ಶಿಕ್ಷಣದಲ್ಲಿ ಅಳವಡಿಕೆ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಪುನೀತ್ ರಾಜಕುಮಾರ್ ಅವರ ಜೀವನಗಾಥೆಯನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕೆಂದು ಕೆಲ ಸಂಘಸಂಸ್ಥೆಗಳು ಸರ್ಕಾರಕ್ಕೆ ಒತ್ತಾಯಿಸಿವೆ. ಹೀಗಾಗಿ ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು. ಎಲ್ಲರ ಮನವಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.