- ಪ್ರಜ್ವಲ್ ರೇವಣ್ಣಗೆ ಜೈಲಾ? ಬೇಲಾ?
- ಕೋರ್ಟ್ ತೀರ್ಪಿನ ಮೇಲೆ ನಿಂತಿದೆ ರಾಜಕಾರಣ ಭವಿಷ್ಯ
- ಪ್ರಜ್ವಲ್ ರೇವಣ್ಣ ಮೇಲಿದೆ ಒಟ್ಟು 4 ಕೇಸ್
Bengaluru: ಮಾಜಿ ಸಂಸದ ಹಾಗೂ ಜಿಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದ ತೀರ್ಪು ಆಗಸ್ಟ್ 1 ರಂದು ಹೊರಬೀಳಲಿದೆ.
14 ತಿಂಗಳಿಂದ ಜೈಲಿನಲ್ಲಿರುವ ಪ್ರಜ್ವಲ್‌ಗಾಗಿ ಅವರ ತಂದೆ ಎಚ್.ಡಿ. ರೇವಣ್ಣ ಹೋರಾಟ ನಡೆಸುತ್ತಿದ್ದಾರೆ.
ಆ .1 ರಂದು ಹೊರಬೀಳುವ ತೀರ್ಪು ರೇವಣ್ಣ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಕೂಡ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
ನ್ಯಾಯಾಲಯದ ತೀರ್ಪು ನಿರೀಕ್ಷೆಯಲ್ಲಿ ಕುಟುಂಬ
ಬೆಂಗಳೂರು ನಗರದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು 26 ಸಾಕ್ಷಿಗಳ ವಿಚಾರಣೆ ಮುಗಿಸಿ ಆಗಸ್ಟ್ 1 ರಂದು ತೀರ್ಪು ಘೋಷಿಸಲಿದ್ದಾರೆ.
ಈ ತೀರ್ಪು ಪ್ರಜ್ವಲ್ ರೇವಣ್ಣ ಅವರ ಅಪರಾಧವನ್ನು ಸಾಬೀತುಮಾಡುತ್ತದೆಯೇ ಅಥವಾ ನಿರ್ದೋಷಿ ಎನ್ನುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಪ್ರಜ್ವಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳಡಿ ಗಂಭೀರ ಆರೋಪಗಳಿವೆ.
ಯಾವ ಯಾವ ಸೆಕ್ಷನ್‌ಗಳಡಿ ಪ್ರಕರಣ?
IPC 376 (2)(k) – ಅಧಿಕಾರ ದುರುಪಯೋಗ ಪಡಿಸಿ ಅತ್ಯಾಚಾರ
IPC 376 (2)(n) – ಬಹುಪಾಲು ಅತ್ಯಾಚಾರ
IPC 354 (A), (B), (C) – ಲೈಂಗಿಕ ಕಿರುಕುಳ, ವಿವಸ್ತ್ರಗೊಳಿಸುವುದು, ಅಶ್ಲೀಲ ದೃಶ್ಯಗಳು
IPC 506 – ಜೀವ ಬೆದರಿಕೆ
IPC 201 – ಸಾಕ್ಷ್ಯ ನಾಶ
ಈ ಎಲ್ಲಾ ಸೆಕ್ಷನ್‌ಗಳು ನ್ಯಾಯಾಲಯದಲ್ಲಿ ಚರ್ಚೆಯಾಗಿದ್ದು, ತೀರ್ಪು ಹೊರಬಂದರೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಲಿದೆ.
ಪ್ರಜ್ವಲ್ ರೇವಣ್ಣ ಅಪರಾಧ ಸಾಬೀತಾದ್ರೆ ಜೈಲು ಶಿಕ್ಷೆ
ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರನ್ನು ಅಪರಾಧಿ ಎಂದು ತೀರ್ಮಾನಿಸಿದರೆ, ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆಗೂ ಅವಕಾಶವಿದೆ.
ಇದರಿಂದ ಅವರು ರಾಜಕೀಯವಾಗಿ ಸಂಪೂರ್ಣವಾಗಿ ಹೊರಗುಳಿಯಬೇಕಾಗಬಹುದು.
ಜೈಲಿನಲ್ಲಿರುವವರು ಚುನಾವಣೆ ಹಕ್ಕು ಕಳೆದುಕೊಳ್ಳುವುದರಿಂದ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅವರು ನಿಂತುಕೊಳ್ಳುವುದು ದೊಡ್ಡ ಮಟ್ಟದಲ್ಲಿ ಸವಾಲಾಗಿ ಪರಿಣಮಿಸಬಹುದು.
ಅಲ್ಲಿಗೆ ಅವರ ರಾಜಕೀಯ ಭವಿಷ್ಯ ನಿರ್ನಾಮ ಆದಂತಾಗುತ್ತದೆ.
ಏನು ಈ ಆರೋಪದ ಹಿನ್ನೆಲೆ?
ಕೆ.ಆರ್. ನಗರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಗೃಹಕಾರ್ಯಕರ್ತೆ ಮೇಲೆ ಫಾರ್ಮ್‌ಹೌಸ್‌ನಲ್ಲಿ ಪದೇಪದೇ ಅತ್ಯಾಚಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಪ್ರಜ್ವಲ್ ವಿರುದ್ಧ ಕೇಳಿಬಂದಿದೆ.
ಈ ಕೃತ್ಯಗಳು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಡೆದಿದೆ ಎನ್ನಲಾಗಿದ್ದು, ಮೊದಲು ದೂರು ನೀಡದ ಮಹಿಳೆ ಬಳಿಕ ವಿಡಿಯೋಗಳ ಲೀಕ್ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.
2024ರ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳು ವೈರಲ್ ಆಗಿ ಈ ಪ್ರಕರಣಕ್ಕೆ ಭಾರೀ ತಿರುವು ನೀಡಿದವು.
ಸುಮಾರು 2,900ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ದೃಶ್ಯಗಳು ಪತ್ತೆಯಾಗಿದ್ದು, ದೇಶವ್ಯಾಪಿ ಸಂಚಲನಕ್ಕೀಡಾಗಿತ್ತು.
ಈ ಘಟನೆಯ ನಂತರ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಜೆಡಿಎಸ್ ಪಕ್ಷಕ್ಕೆ ನಿರ್ಣಾಯಕ ಕ್ಷಣ
ಆಗಸ್ಟ್ 1 ರಂದು ನೀಡುವ ತೀರ್ಪು, ಕೇವಲ ಪ್ರಜ್ವಲ್ ರೇವಣ್ಣ ವ್ಯಕ್ತಿಗತ ಬದುಕಿಗಷ್ಟೆ ಅಲ್ಲ, ರೇವಣ್ಣ ಕುಟುಂಬದ ಹಾಗೂ ಜಿಡಿಎಸ್ ಪಕ್ಷದ ಭವಿಷ್ಯಕ್ಕೂ ನಿರ್ಣಾಯಕ ಕ್ಷಣವಾಗಿದೆ.
ಇದನ್ನು ಓದಿ : ಯೂರಿಯಾ ಗೊಬ್ಬರದ ಕೊರತೆಯಿಂದ ಕರ್ನಾಟಕದ ರೈತರಿಗೆ ಸಂಕಷ್ಟ: ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
ಪ್ರಜ್ವಲ್ ರಾಜಕೀಯಕ್ಕೆ ವಾಪಸ್ಸಾಗುತ್ತಾರ ಅಥವಾ ಅವರು ಮುಂದಿನ ಹಂತದಲ್ಲೂ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆಯೆ ಎಂಬುದು ತೀರ್ಪಿನ ನಂತರದಲ್ಲಿ ತಿಳಿಯುತ್ತದೆ.