ಮೈಸೂರು, ಮೇ. 28: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ವಿಚಾರದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ನಡುವೆ ಜಟಾಪಟಿ ಶುರುವಾಗಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಪ್ರತಾಪ್ ಸಿಂಹ, ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಟಿಡಿ, ನಿನಗೆ ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು. ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡ. ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ರೆ ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡ. ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ಯ ಹೇಳು ಎಂದು ಪ್ರಶ್ನಿಸಿದರು.
ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು ಆಡಳಿತ ಪಕ್ಷದವರಲ್ಲ. ನೀನು ಪವರ್ಫುಲ್ ಎಂಪಿ, ಸಿಎಂ ನೀನು ಹೇಳಿದಂತೆ ಕೇಳ್ತಾರೆ. ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿ ತೋರಿಸು. ಅದನ್ನ ಬಿಟ್ಟು ಪೇಪರ್ ಸ್ಟೇಟ್ಮೆಂಟ್ ಕೊಟ್ಟು ಗೊಂದಲ ಯಾಕೆ ಮೂಡುಸ್ತೀರಾ? ಜನರ ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ತಿಳಿಸಿದರು.
ಇದಕ್ಕೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ಸಿಂಹ, ಅಧಿಕಾರಿಗಳನ್ನ ಟ್ರಾನ್ಸಫರ್ ಮಾಡೋದೇ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೆನೆ. ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಅಂತರದ ಮತಗಳಿಂದ ಗೆಲ್ಲಿಸಿದ್ರು.
ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದ್ದರಿಂದಾಗಿ, ಎರಡನೇ ಚುನಾವಣೆಯಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಮತಗಳಿಂದ ಗೆಲ್ಲಿಸಿದ್ರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು.
ಡಿಸಿಯನ್ನೋ, ಇನ್ಯಾರೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೆನೆ ಎಂದರು.