ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿದರೆ, ಅದರಿಂದ ಮಕ್ಕಳ ಹೊಟ್ಟೆ ತುಂಬುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿರುವುದು ಸತ್ಯ. ಆದರೆ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯನ್ನು ಮಾಡಲು ತಲೆ ತುಂಬಿಸುತ್ತದೆ ಎಂದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕುಮಾರಸ್ವಾಮಿಯವರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯನ್ನು ಕಲಿಸುವುದರಿಂದ ಹೊಟ್ಟೆ ತುಂಬುವುದಿಲ್ಲ. ಆದರೆ ತಲೆ ತುಂಬುತ್ತದೆ.

ನಾನು, ನನ್ನ ಹೆಂಡತಿ, ನನ್ನ ಮಗ ಹೀಗೆ ಕೌಟುಂಬಿಕ ವ್ಯಾಮೋಹದಿಂದ ನಮ್ಮ ಮನಸ್ಸನ್ನು ಹೊರತಂದು, ಸಮಾಜಕ್ಕಾಗಿ ಸೇವೆ ಮಾಡಲು, ನಿಸ್ವಾರ್ಥ ಮನಸ್ಥಿತಿಯನ್ನು ನಮ್ಮಲ್ಲಿ ತುಂಬುತ್ತದೆ. ಸದಾ ಕುಟುಂಬದ ಏಳಿಗೆಗಾಗಿ ಚಿಂತಿಸುವ ಮನಸ್ಥಿತಿಯಿಂದ ಸಮಾಜದ ಏಳಿಗೆಗಾಗಿ ಚಿಂತಿಸುವ ಚಿಂತನೆಯನ್ನು ತಲೆಯಲ್ಲಿ ತುಂಬುತ್ತದೆ. ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸುವುದರಿಂದ ಮಕ್ಕಳ ನೈತಿಕ ಮೌಲ್ಯ ವೃದ್ದಿಯಾಗುತ್ತದೆ. ಸೇವೆಯ ಮನೋಭಾವ ಬೆಳೆಯುತ್ತದೆ. ಹೀಗಾಗಿ ಭಗವದ್ಗೀತೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಇನ್ನು ಇತ್ತೀಚಿನ ದಿನಗಳಲ್ಲಿ ಪಠ್ಯಕ್ರಮದಲ್ಲಿ ನೈತಿಕ ಮೌಲ್ಯ ವೃದ್ದಿಸುವ ಅಧ್ಯಾಯಗಳಿಲ್ಲ. ನಮ್ಮ ನೆಲದ ಸಂಸ್ಕೃತಿ, ನಮ್ಮ ಇತಿಹಾಸದಲ್ಲಿ, ಮಹಾಕಾವ್ಯಗಳ ಕಥೆಗಳಲ್ಲಿ ನೈತಿಕ ಜೀವನದ ಪಾಠಗಳಿವೆ. ಅವುಗಳನ್ನು ಮಕ್ಕಳಿಗೆ ಕಲಿಸುವುದು ಮುಖ್ಯವಾಗಿದೆ. ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ಕೆಲ ದಿನಗಳ ಹಿಂದೆ ಗುಜರಾತ ರಾಜ್ಯ ಸರ್ಕಾರ 6 ರಿಂದ 12ನೇ ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಿಕೊಂಡಿತ್ತು.

ಇದೀಗ ಕರ್ನಾಟಕ ರಾಜ್ಯ ಸರ್ಕಾರವೂ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಿಕೊಳ್ಳಲು ಸಮಿತಿ ರಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದ ಹೊಸ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರ್ಪಡೆಯಾಗಬಹುದು. ಆದರೆ ಸರ್ಕಾರ ಈ ಕ್ರಮವನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದರು. ಭಗವದ್ಗೀತೆಯನ್ನು ಶಾಲೆಯಲ್ಲಿ ಕಲಿಸುವುದರಿಂದ ಮಕ್ಕಳ ಹೊಟ್ಟೆ ತುಂಬುವುದಿಲ್ಲ, ಮಕ್ಕಳಿಗೆ ಹೊಟ್ಟೆ ತುಂಬಿಸುವ ಶಿಕ್ಷಣದ ಅಗತ್ಯವಿದೆ.
ಬೇಕಿದ್ದರೆ ಕುಟುಂಬದಲ್ಲಿಯೇ ಮಕ್ಕಳಿಗೆ ಭಗವದ್ಗೀತೆಯನ್ನು ಹೇಳಿಕೊಡುತ್ತಾರೆ. ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಮಾಡುವುದು ಬೇಡ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದರು.