ಹಿಂದೂ ಮತ್ತು ಮುಸ್ಲಿಂಮರು ಯಾವುದೇ ಕಾರಣಕ್ಕೂ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು 1947ರಲ್ಲಿ ದೇಶ ವಿಭಜನೆಯ ಸಂದರ್ಭದಲ್ಲೇ ಭವಿಷ್ಯ ನುಡಿದಿದ್ದರು. ಅವರ ಮಾತು ಇದೀಗ ನಮ್ಮ ಅರಿವಿಗೆ ಬರುತ್ತಿದೆ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, 1947ರಲ್ಲಿ ದೇಶವನ್ನು ವಿಭಜನೆ ಮಾಡಬೇಕೆಂದು ನಿರ್ಧರಿಸಿದಾಗ, ಬಾಬಾ ಸಾಹೇಬರು ಅತ್ಯಂತ ಸ್ಪಷ್ಟವಾಗಿ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಇಲ್ಲಿಗೆ ಕರೆಸಿಕೊಳ್ಳಿ, ಇಲ್ಲಿರುವ ಮುಸ್ಲಿಂಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ.

ಇಲ್ಲವಾದರೆ ಮುಂದೊಂದು ದಿನ ಹಿಂದೂ-ಮುಸ್ಲಿಂ ಸಂಘರ್ಷ ಸೃಷ್ಟಿಯಾಗಲಿದೆ ಎಂದಿದ್ದರು. ಹಿಜಾಬ್ ವಿವಾದದಲ್ಲಿ ಅಂಬೇಡ್ಕರ್ ಅವರ ಮಾತು ನಿಜವಾಗಿದೆ. ಮುಸ್ಲಿಂಮರು ನಮಗೆ ಕೋರ್ಟ್ ಆದೇಶಕ್ಕಿಂತ ಧರ್ಮವೇ ಮುಖ್ಯ ಎಂದು ವಾದಿಸುತ್ತಿದ್ದಾರೆ. ಈ ಹಿಂದೆ ಅಯೋಧ್ಯ ವಿವಾದದಲ್ಲಿ ಕೋರ್ಟ್ ಕೋರ್ಟ್ ಎನ್ನುತ್ತಿದ್ದರು. ಕೋರ್ಟ್ ತೀರ್ಪು ಬಂದ ಬಳಿಕವೇ ನಾವು ಶ್ರೀರಾಮ ಮಂದಿರ ಕಟ್ಟಿದೇವು. ಆದರೆ ಇದೀಗ ಹಿಜಾಬ್ ವಿವಾದದಲ್ಲಿ ಕೋರ್ಟ್ ತೀರ್ಪಿನ ವಿರುದ್ದವೇ ಪ್ರತಿಭಟನೆ ಮಾಡುತ್ತಿರುವುದು ದುರದೃಷ್ಟಕರ.
ನಮ್ಮ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಎಂದು ವಾದಿಸುತ್ತಿದ್ದಾರೆ. ಆದರೆ ಹೈಕೋರ್ಟ್ ತ್ರಿಸದಸ್ಯರ ನೇತೃತ್ವದ ಸಾಂವಿಧಾನಿಕ ಪೀಠ, ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿದ್ದರು, ಹಿಜಾಬ್ ನಮ್ಮ ಧರ್ಮದ ಭಾಗ ಎಂದೇ ವಾದಿಸುತ್ತಿದ್ದಾರೆ. ಸಂವಿಧಾನದ ಆಶಯಗಳ ಪ್ರಕಾರ ಹೈಕೋರ್ಟ್ ನೀಡಿರುವ ತೀರ್ಪನ್ನು ಇವರು ಸ್ವೀಕರಿಸಲು ಸಿದ್ದರಿಲ್ಲ. ದೇಶಕ್ಕಿಂತ ಧರ್ಮವೇ ಮುಖ್ಯವಾದಾಗ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತದೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ. ಆದರೆ ಧರ್ಮದ ಪ್ರಕಾರ ಕಾನೂನು ಅಥವಾ ದೇಶ ನಡೆಯುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನವೇ ಪರಮೋಚ್ಚ ಅಧಿಕಾರ ಹೊಂದಿದೆ. ಸಂವಿಧಾನ ಹೇಳಿದಂತೆ ನಾವೆಲ್ಲಾ ನಡೆಯಬೇಕು. ಧರ್ಮದ ಕಾಯ್ದೆ-ಕಟ್ಟಳೆಗಳು ನಮ್ಮ ದೇಶದಲ್ಲಿ ನಡೆಯುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.