ರಾಷ್ಟ್ರಪತಿ ಚುನಾವಣೆಗೆ(President Election) ನಾಮಪತ್ರ(Nomination) ಸಲ್ಲಿಕೆ ಪ್ರಾರಂಭವಾಗಿದೆ. ಈ ಬಾರಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ಸಭೆಯನ್ನು ನಡೆಸಿವೆ. ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದಲ್ಲಿ ನಡೆದ ಸಭೆಗೆ ಎನ್‍ಸಿಪಿ, ಜೆಡಿಎಸ್, ಕಾಂಗ್ರೆಸ್, ಎಸ್‍ಸಿ, ಆರ್‍ಜೆಡಿ ಸೇರಿದಂತೆ ಅನೇಕ ಪಕ್ಷಗಳು ಭಾಗವಹಿಸಿವೆ. ಇನ್ನೊಂದೆಡೆ ಬಿಜೆಪಿ(BJP) ಕೂಡಾ ಸೂಕ್ತ ಅಭ್ಯರ್ಥಿ ಆಯ್ಕೆಗಾಗಿ ಪಕ್ಷದೊಳಗೆ ಚರ್ಚೆ ನಡೆಸುತ್ತಿದೆ.

ಮೂಲಗಳ ಪ್ರಕಾರ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅಥವಾ ಮುಸ್ಲಿಂ ಸಮುದಾಯದ ಆರಿಫ್ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಒಲವು ಹೊಂದಿದೆ ಎನ್ನಲಾಗಿದೆ. ಜಾರ್ಖಂಡ್(Jharkhand) ರಾಜ್ಯದ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು(Draupadi Murmu) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ, ಬುಡಕಟ್ಟು ಸಮುದಾಯದ ಮಹಿಳೆಯನ್ನು ಮೊದಲ ಬಾರಿಗೆ ರಾಷ್ಟ್ರಪತಿಯನ್ನಾಗಿಸಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ. ಅದೇ ರೀತಿ ಮುಂಬರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‍ಘಡ್, ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಈ ಅಂಶ ನೆರವಾಗಲಿದೆ ಎನ್ನಲಾಗಿದೆ.
ಇನ್ನು ಕೇರಳ(Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಬದಲಾಗಲಿದೆ. ಮುಸ್ಲಿಂ ಸಮುದಾಯಕ್ಕೂ ಬಿಜೆಪಿ ಸೂಕ್ತ ಅವಕಾಶ ನೀಡಲು ಸಿದ್ದವಿದೆ ಎಂಬ ಸಂದೇಶವನ್ನು ಅಂತರಾಷ್ಟ್ರೀಯ ಸಮುದಾಯಕ್ಕೆ ನೀಡಿದಂತಾಗುತ್ತದೆ. ಇನ್ನು ಬಿಜೆಪಿಯ ಪ್ರಬಲ ಸಮರ್ಥಕರಾಗಿರುವ ಆರಿಫ್ ಖಾನ್‍ರನ್ನು ರಾಷ್ಟ್ರಪತಿ ಮಾಡಿದರೆ ಅನೇಕ ಲಾಭಗಳಿವೆ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.

ಈ ಇಬ್ಬರಲ್ಲಿ ಯಾರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಬಿಜೆಪಿಯಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ರಾಜಕೀಯ ಲಾಭ, ಪಕ್ಷದ ಸೈದ್ದಾಂತಿಕ ನಿಲುವು ಹೀಗೆ ಅನೇಕ ಅಂಶಗಳ ಕುರಿತು ಬಿಜೆಪಿ ಚಿಂತನೆ ನಡೆಸಿದೆ. ಇನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಹೆಚ್ಚಿನ ಮತ ಮೌಲ್ಯ ಹೊಂದಿದೆ.