ಢಾಕಾ, ಮಾ. 26: ಕೋವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗ್ಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬಂದಿಳಿದ ಅವರನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸ್ವಾಗತಿಸಿದ್ದಾರೆ. ಬಾಂಗ್ಲಾದ 50ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ, ನಾಳೆ ಮಾಟುವ ಸಮುದಾಯದ ಒರಾಕಂಡಿಯಲ್ಲಿರುವ ದೇಗುಲ ದರ್ಶನ ಕೈಗೊಳ್ಳಲಿದ್ದಾರೆ.
ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಶೇಖ್ ಮುಜೀಬುರ್ ರಹಮಾನ್ ಅವರ ಜನ್ಮಶತಮಾನೋತ್ಸವದ ನಿಮಿತ್ತಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ ಬಾಂಗ್ಲಾದೇಶದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಅಲ್ಲದೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಅಕ್ಕಪಕ್ಕದ ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಭೂತಾನ್ ದೇಶಗಳ ಉನ್ನತ ಮಟ್ಟದ ನಾಯಕರು ಇದೇ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಈ ಎಲ್ಲ ದೇಶಗಳ ನಾಯಕರು ಒಟ್ಟಿಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ನಂತರ ಭಾರತದ ಪ್ರಧಾನಿ ಸೇರಿ ಇತರ ರಾಷ್ಟ್ರಗಳ ನಾಯಕರು ದೇಶಕ್ಕೆ ಭೇಟಿ ನೀಡುತ್ತಿರುವುದು ಐತಿಹಾಸಿಕ ಘಳಿಗೆ ಎಂದೇ ಬಾಂಗ್ಲಾದೇಶ ವ್ಯಾಖ್ಯಾನಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಮೊದಲ ಬಾರಿಗೆ ಹೊರ ದೇಶದ ಗಣ್ಯರೊಬ್ಬರು ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಾಂಗ್ಲಾದೇಶದ ಪಾಲಿಗೆ ಮಹತ್ವದ್ದಾಗಿದೆ.