English English Kannada Kannada

ಖಾಸಗಿ ಶಾಲೆಗಳಲ್ಲಿ ನಡೀತಿದೆ ಬಿರುಸಿನ ವ್ಯಾಪಾರ ! ನೊಂದ ಪಾಲಕರಿಗೆ ಗಾಯದ ಮೇಲೆ ಬರೆ. ಕಣ್ಮುಚ್ಚಿ ಕುಳಿತಿದೆ ಶಿಕ್ಷಣ ಇಲಾಖೆ !

Share on facebook
Share on google
Share on twitter
Share on linkedin
Share on print

ಕೊರೋನಾ ಪ್ರಾರಂಭವಾದಾಗಿನಿಂದ ಹಳಿತಪ್ಪಿದ ರಂಗಗಳಲ್ಲಿ ಶೈಕ್ಷಣಿಕ ರಂಗವೂ ಒಂದು. ಎರಡು ವರ್ಷಗಳಿಂದ ಶಾಲೆಗಳು ನಡೆಯದಿದ್ದರೂ ಪೋಷಕರಿಗೆ ಶುಲ್ಕ ಭರಿಸುವ ಹೊರೆ ಮಾತ್ರ ತಪ್ಪಿಲ್ಲ. ಪರೀಕ್ಷೆಯೇ ಇಲ್ಲದೆ ಉತ್ತೀರ್ಣರಾಗಿ ಮುಂದಿನ ತರಗತಿಯನ್ನು ತಲುಪುತ್ತಿರುವ ವಿದ್ಯಾರ್ಥಿಗಳ ಪೋಷಕರಿಂದ ಸಂಪೂರ್ಣ ವರ್ಷದ ಶುಲ್ಕವನ್ನು ಖಾಸಗೀ ಶಾಲೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ.

ಇದರ ವಿರುದ್ಧವಾಗಿ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಉತ್ತರವಾಗಿ ಆನ್ಲೈನ್ ಮಾದರಿಯನ್ನು ಅಳವಡಿಸಿಕೊಂಡರು. ಆನಂತರ ಶಿಕ್ಷಕ ವೃಂದಕ್ಕೆ ಸಂಬಳ ಕೊಡುವ ನೆಪದಲ್ಲಿ ಸಂಪೂರ್ಣ ಶುಲ್ಕವನ್ನು ಪಡೆದ ಶಾಲೆಗಳು ಶಿಕ್ಷಕರಿಗೆ ಕೊಟ್ಟಿದ್ದು ಮಾತ್ರ ಅರ್ಧ ಸಂಬಳ. ಆದರೆ ಇವರುಗಳ ವ್ಯಾಪಾರಕ್ಕೆ ಕಡಿವಾಣ ಹಾಕಬೇಕಾಗಿದ್ದ ಸರ್ಕಾರ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾಧ್ಯಮಗಳಲ್ಲಿ ಕೆಲವೊಂದು ಕಾನೂನಿನ ಭರವಸೆ ನೀಡಿ ಸುಮ್ಮನಾಗಿದ್ದು ಮಾತ್ರ ವ್ಯವಸ್ಥೆಯನ್ನು ಹೀಯಾಳಿಸುವಂತಿತ್ತು.

ಇದೀಗ ಶಾಲೆಗಳನ್ನು ತೆರೆಯುವ ಅನುಮತಿ ನೀಡಿದ್ದು. ಖಾಸಗಿ ಶಾಲೆಗಳ ವ್ಯವಹಾರವನ್ನು ವೃದ್ಧಿಸುವ ಸಂಚಿನ ಸುಳಿವೊಂದನ್ನು ನೀಡಿದಂತಿದೆ. ಅದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಪಾರಂಭವಾಗಿರುವ ಸಮವಸ್ತ್ರದ ವ್ಯಾಪಾರ. ಅದೂ ಕೂಡ ಎರಡು ವರ್ಷದ ಮುಂಚೆ ಉಳಿದಿರುವಂತಹ ಸಮವಸ್ತ್ರಗಳನ್ನು ಈಗ ಪೋಷಕರ ತಲೆಗೆ ಕಟ್ಟಲಾಗುತ್ತಿದೆ. ನೆನಪಿರಲಿ ಸ್ನೇಹಿತರೆ ಇಂದು ಇವರು ನಿಮಗೆ ಹೆಚ್ಚು ಹಣವನ್ನು ಪಡೆದು ನೀಡುತ್ತಿರುವ ಹೆಚ್ಚಿನ ಸಮವಸ್ತ್ರಗಳು ಎರಡು ವರ್ಷ ಹಳೆಯವು ಅವು ಇನ್ನೆಷ್ಟು ಬಾಳಿಕೆ ಬಂದಾವು, ಯೋಚಿಸಿ ನೋಡಿ.

ಪ್ರಶ್ನೆ ಮಾಡಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ನಮಗೆ ಶಿಸ್ತು ಮುಖ್ಯ ಎನ್ನುತ್ತಾರೆ. ಅದೇ ನಮ್ಮ ಮಕ್ಕಳಿಗೆ ಸರಿಹೊಂದುವ ಸಮವಸ್ತ್ರ ಇವರಲ್ಲಿ ಇಲ್ಲದಿದ್ದಾಗ ಇರಲಿ ಬಿಡಿ ಬೇರೆ ಸಮವಸ್ತ್ರ ಬಂದಮೇಲೆ ತೆಗೆದುಕೊಳ್ಳಿ ಎನ್ನುತ್ತಾರೆ. ಆಗ ಇವರಿಗೆ ಶಿಸ್ತು ಕಾಣುವುದಿಲ್ಲವೇ.

ಇಂದಿನ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿ ದಿನದೂಡುತ್ತಿರುವ ಜನಸಾಮಾನ್ಯರಿಗೆ ತಾವು ಎರಡು ವರ್ಷಗಳಿಂದ ಕಳೆದುಕೊಂಡಿರುವ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕೋ ಅಥವಾ ತಮ್ಮ ಮಕ್ಕಳ ಭವಿಷ್ಯದ ಕನಸ ಕಂಡು ಮಕ್ಕಳ ಸಮವಸ್ತ್ರಕ್ಕೋಸ್ಕರ ಮತ್ತೆ ಸಾಲಕ್ಕೆ ಕೈಚಾಚಬೇಕೋ ತಿಳಿಯದಾಗಿದೆ. ಏಕೆಂದರೆ ಈಗಾಗಲೇ ಶಾಲಾ ಶುಲ್ಕವನ್ನು ಭರಿಸಲು ಸಾಲವೆಂಬ ಸುಳಿಯಲ್ಲಿ ಬಿದ್ದಾಗಿದೆ. ಈಗ ಪ್ರಾರಂಭವಾಗಿರುವ ಶಾಲೆಗಳು ಮತ್ತೆ ಎಷ್ಟು ದಿನಗಳಲ್ಲಿ ಬಾಗಿಲು ಮುಚ್ಚುತ್ತಾವೋ ಗೊತ್ತಿಲ್ಲ.

 ಈಗಾಗಲೇ ಮೂರನೇ ಅಲೆಯ ಲಾಕ್ಡೌನ್ ಆತಂಕ ಎಲ್ಲರನ್ನೂ ಕಾಡುತ್ತಿದೆ. ಇವರ ವ್ಯಾಪಾರವೆಲ್ಲಾ ಮುಗಿಯುವಷ್ಟರಲ್ಲಿ ಮತ್ತೆ ಲಾಕ್ಡೌನ್ ಘೋಷಣೆಯಾದರೆ ಖರೀದಿಸಿದ ಸಮವಸ್ತ್ರವನ್ನು ಹಿಂತಿರುಗಿಸಲಾಗುವುದಿಲ್ಲ…. ಎಲ್ಲದಕ್ಕೂ ಸರ್ಕಾರವನ್ನೇ ದೂಷಿಸಲೂ ಆಗುವುದಿಲ್ಲ. ಎಲ್ಲಿಯವರೆಗೆ ಜನಸಾಮಾನ್ಯರು ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದಿಲ್ಲವೋ. ಯಾರಾದರೂ ಎತ್ತಿದ ಧ್ವನಿಗೆ ಧ್ವನಿ ಸೇರಿಸುವುದಿಲ್ಲವೋ. ಅಲ್ಲಿಯವರೆಗೆ ಅನ್ಯಾಯಗಳು ರಾಜಾರೋಷವಾಗಿ ಮುಂದುವರೆಯುತ್ತವೆ.

ನಮ್ಮ ಮುಂದಿನ ಪೀಳಿಗೆಯನ್ನು ಸನ್ಮಾರ್ಗದೆಡೆಗೆ ನಡೆಸಬೇಕಾಗಿರುವ ವಿದ್ಯಾಸಂಸ್ಥೆಗಳು ವ್ಯಾಪಾರದ ಭರದಲ್ಲಿ ಮಾನವೀಯತೆಯನ್ನು ಕಳೆದುಕೊಳ್ಳುತ್ತಿರುವುದು ಮಾತ್ರ ಸಮಾಜಘಾತುಕ ಪ್ರೇರಣೆಗೆ ಮುನ್ನುಡಿಯಾದಂತಿದೆ. ಕಡಿವಾಣದ ಕಟ್ಟೆಯ ಭದ್ರಪಡಿಸಬೇಕಾಗಿರುವ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಲಿ. ಪ್ರಜಾಪ್ರಭುತ್ವದ ನಾಡಿನಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬನಿಗೂ ಇದೆ ಎನ್ನುವ ಸತ್ಯವನ್ನು ಪ್ರಜೆಗಳು ಅರ್ಥಮಾಡಿಕೊಳ್ಳಲಿ ಎಂದು ಆಶಿಸುತ್ತಾ ಪತ್ರಿಕಾ ಬಳಗದೊಂದಿಗೆ.

ವೇಣುಗೋಪಾಲ್, ಬೆಂಗಳೂರು

Submit Your Article