ಆರ್‍ಎಸ್‍ಎಸ್(RSS) ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಸಂಘದ ಕಚೇರಿಯ ಮೇಲೆ 57 ವರ್ಷ ನಮ್ಮ ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ?

ಯಾಕೆ ಮನುಸ್ಮೃತಿ ಸಂವಿಧಾನ(Constitution) ಆಗಬೇಕಿತ್ತು ಎಂದಿರಿ? ಈ ವಿಚಾರಗಳನ್ನೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತನ್ನಿ, ಯುವಕರು ಓದಿ ನಂತರ ಯಾರು ನಿಜವಾದ ದೇಶಪ್ರೇಮಿಗಳು ಎಂದು ತೀರ್ಮಾನಿಸಲಿ ಎಂದು ಕಾಂಗ್ರೆಸ್ ನಾಯಕ(Congress Leader) ಪ್ರಿಯಾಂಕ್ ಖರ್ಗೆ(Priyank Kharghe) ಬಿಜೆಪಿಗೆ ಸವಾಲು ಹಾಕಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ(Bargur Ramachandrapa) ಅವರ ಸಮಿತಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪಠ್ಯ ಪರಿಷ್ಕರಣೆ ಮಾಡಿದೆ.
27 ಉಪ ಸಮಿತಿ ರಚಿಸಿ, ತಜ್ಞರ ಅಭಿಪ್ರಾಯ ಪಡೆದು, ಸದನದಲ್ಲಿ ಚರ್ಚಿಸಿ ಪರಿಷ್ಕೃತ ಪಠ್ಯ ಜಾರಿಗೆ ತರಲಾಗಿತ್ತು. ಉಪ ಸಮಿತಿಗಳ ಲೋಪ ಸರಿಪಡಿಸಲು ಉನ್ನತ ಸಮಿತಿ ರಚಿಸಿ, ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದರು. ಇನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಮಾತನಾಡಿ, ಪ್ರಜ್ಞಾವಂತ ಜನರ ಧ್ವನಿಯಾಗಿ ವಿದ್ಯಾರ್ಥಿಗಳು ಪಠ್ಯ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಕಾನೂನು ಬಾಹಿರ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಹೋರಾಟಗಾರರನ್ನು ಬಂಧಿಸಿದೆ.

ರಾಜಕೀಯ ದುರುದ್ದೇಶದಿಂದ ಎನ್‍ಎಸ್‍ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರುದ್ಯೋಗಿ ಯುವ ಜನರ ದೊಡ್ಡಮಟ್ಟದ ಪಾದಯಾತ್ರೆ ಮಾಡಲು ಯುವ ಕಾಂಗ್ರೆಸ್ ಗೆ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಮತ ಧೃವೀಕರಣಕ್ಕಾಗಿ ಎಲ್ಲವನ್ನೂ ಕೇಸರೀಕರಣ ಮಾಡಲಾಗುತ್ತಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.