ಪಾಟ್ನಾ(Patna) ಮಹಿಳಾ ಕಾಲೇಜಿನ ಹೊರಗೆ, 24 ವರ್ಷದ ಪ್ರಿಯಾಂಕಾ ಚೈವಾಲಿ(Priyanka Chaiwali) ಹೆಸರಿನ ಯುವತಿ ಚಹಾದ ಅಂಗಡಿಯನ್ನು ತೆರೆದು ವ್ಯಾಪರ ನಡೆಸುತ್ತಿದ್ದಾರೆ. ಅರ್ಥಶಾಸ್ತ್ರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಆಕೆಗೆ ಉತ್ತಮ ಉದ್ಯೋಗ ಅಥವಾ ಸರ್ಕಾರಿ ಉದ್ಯೋಗವನ್ನು ಸಿಗಲಿಲ್ಲ!

ಇದಕ್ಕೆ ಹತಾಶೆಗೆ ಒಳಗಾಗದೆ, ಧೃತಿಗೆಡದ ಪ್ರಿಯಾಂಕಾ ಒಂದಲ್ಲ ಒಂದು ಮಾರ್ಗ ಇದ್ದೆ ಇರುತ್ತದೆ, ಯಾವುದು ಅಸಾಧ್ಯವಲ್ಲ ಎಂಬ ಛಲದಿಂದ ಟೀ ವ್ಯಾಪಾರಕ್ಕೆ ಹೆಜ್ಜೆಯಿಟ್ಟಿದ್ದಾರೆ. ಪ್ರಿಯಾಂಕಾ ಉತ್ತರ ಪ್ರದೇಶದ ವಾರಣಾಸಿ ಮೂಲದವರು. ಕಳೆದ ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಆದ್ದರಿಂದ, ಎಲ್ಲಾ ಸಾಮಾಜಿಕ ಸಂಪ್ರದಾಯಗಳನ್ನು ಮುರಿದು, ತಾನೇ ವ್ಯಾಪಾರವನ್ನು ಸೃಷ್ಟಿಸುವ ಮೂಲಕ ಉದ್ಯೋಗವನ್ನು ಹುಡುಕಿಕೊಂಡಿದ್ದಾರೆ.
ಉದ್ಯೋಗ ಸಿಗಲಿಲ್ಲ ಎಂದಾಗ ಹಲವರು ಕಾಯಲು, ನಿರುದ್ಯೋಗಿಯಾಗಿ ಉಳಿಯಲು ಅಥವಾ ಸರ್ಕಾರದ ವಿರುದ್ಧ ಪ್ರತಿಭಟಿಸಲು ಇಷ್ಟಪಡುವ ಅನೇಕ ಜನರಿಗಿಂತ ಭಿನ್ನವಾಗಿ, ಪ್ರಿಯಾಂಕಾ ಸ್ವಯಂ ಉದ್ಯೋಗ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ “ನಾನು ಪ್ರತಿಭಟಿಸಿದರೆ ಏನಾಗುತ್ತಿತ್ತು? ನನ್ನ ಸಮಯ ಮತ್ತು ಶಕ್ತಿ ಮಾತ್ರ ವ್ಯರ್ಥವಾಗುತ್ತಿತ್ತು. ನಾನು ಏನನ್ನೂ ಪಡೆಯುವುದಿಲ್ಲ. ಅಲ್ಲಿ ನನ್ನ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ನಾನು ವಿಭಿನ್ನವಾಗಿ ಕೆಲಸ ಮಾಡಲು ನಿರ್ಧರಿಸಿದೆ ಅಷ್ಟೇ!

ನಾನು ಸ್ವಾವಲಂಬಿಯಾಗಲು ಬಯಸಿದ್ದೆ. ಹಾಗಾಗಿ ಈ ದಾರಿಯನ್ನು ಆಯ್ದುಕೊಂಡೆ” ಎನ್ನುತ್ತಾರೆ ಪ್ರಿಯಾಂಕಾ. ಪಾಟ್ನಾ ಮಹಿಳಾ ಕಾಲೇಜಿನ ಹೊರಗೆ ಪಾನ್ ಟೀ ಮತ್ತು ಚಾಕೊಲೇಟ್ ಟೀ ಸೇರಿದಂತೆ ಅತ್ಯಂತ ನವೀನ ಶೈಲಿಯ ಚಹಾವನ್ನು ನೀಡುವ ಅಂಗಡಿ ಇವರದ್ದಾಗಿದೆ. ಆಕೆಯ ಅಂಗಡಿಯ ಹೊರಗಿನ ಫಲಕವೂ ಹೀಗೆ ಹಿಂದಿಯಲ್ಲಿ ಹೀಗೆ ಹೇಳುತ್ತದೆ, “ಆತ್ಮನಿರ್ಬರ್ ಭಾರತ್ ಕಡೆಗೆ ಉಪಕ್ರಮ. ಸೋಚ್ ಮತ್, ಚಾಲು ಕರ್ ದೇ ಬಾಸ್ [ಅದರ ಬಗ್ಗೆ ಯೋಚಿಸಬೇಡಿ, ಪ್ರಾರಂಭಿಸಿ].” “ನಾನು ಸ್ವಾವಲಂಬಿಯಾಗಲು ಬಯಸಿದ್ದೆ. ಆದ್ದರಿಂದ, ನಾನು ಈ ಅಂಗಡಿಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಎಂಬಿಎ ಚಾಯ್ವಾಲಾ ಪ್ರಫುಲ್ ಬಿಲ್ಲೋರ್ ಅವರೇ ನನ್ನ ಸ್ಫೂರ್ತಿ. ನಾನು ಖಂಡಿತವಾಗಿಯೂ ನನ್ನ ವ್ಯವಹಾರವನ್ನು ಇನ್ನೂ ಉತ್ತಮವಾಗಿ ನಡೆಸುತ್ತೇನೆ ಮತ್ತು ನಾನು ಇದನ್ನು ದೊಡ್ಡದಾಗಿ ತೆಗೆದುಕೊಂಡು ಯಶಸ್ವಿಯಾಗಲು ಬಯಸುತ್ತೇನೆ. ಈ ವ್ಯಾಪಾರದ ಬಗ್ಗೆ ನಿಮ್ಮ ಪೋಷಕರಿಗೆ ತಿಳಿದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, “ಅವರಿಗೆ ಹೇಳಿದರೆ ಏನು ಮಾಡುತ್ತಿದ್ದರು? ನಾನು ಓದಲು ಪಾಟ್ನಾಗೆ ಬಂದಿದ್ದೇನೆ ಎಂದು ನಾನು ಅವರಿಗೆ ಹೇಳಿದ್ದೆ. ಆದ್ರೆ, ನಾನು ಈ ಅಂಗಡಿಯನ್ನು ತೆರೆದೆ.

ಈ ಬಗ್ಗೆ ಒಂದು ದಿನದ ಹಿಂದೆಯಷ್ಟೇ ಅವರಿಗೆ ಹೇಳಿದ್ದೆ. ನನಗೆ ಸಿಗುತ್ತಿರುವ ಪ್ರತಿಕ್ರಿಯೆ, ಪ್ರಶಂಸೆ ನೋಡಿ ಅವರು ಈಗ ಒಪ್ಪಿಕೊಂಡಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.
- ಮಾಹಿತಿ ಕೃಪೆ : ಇಂಡಿಯಾ ಟುಡೇ