ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದ ಯುಪಿ ಯೋಧಾ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯದಲ್ಲಿ ಪುಣೇರಿ 44-38 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಯುಪಿ ಯೋಧಾ 18 ಪಾಯಿಂಟ್ಸ್ ಕಲೆಹಾಕಿದ್ರೆ, ಪುಣೇರಿ ಪಲ್ಟನ್ 21 ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ಸಾಧಿಸಿತು. ಎರಡನೇ ಹಂತದಲ್ಲೂ ಕೂಡ ಯುಪಿ ಯೋಧಾವನ್ನ ಹಿಂದಿಕ್ಕಿದ ಪುಣೇರಿ ಪಲ್ಟನ್ 23 ಪಾಯಿಂಟ್ಸ್ ಕಲೆಹಾಕಿದ್ರೆ, ಯುಪಿ ಯೋಧಾ 20 ಪಾಯಿಂಟ್ಸ್ ಮುಟ್ಟಿತು.

ಕೊನೆಯಲ್ಲಿ ಪಂದ್ಯವನ್ನ ಪುಣೇರಿ ಪಲ್ಟನ್ 44-38 ಪಾಯಿಂಟ್ಸ್ಗಳಿಂದ ಗೆದ್ದು ಬೀಗಿತು. ಪಂದ್ಯ ಸೋತರು ಸಹ ಯುಪಿ ಯೋಧಾ ರೈಡಿಂಗ್ ಪಾಯಿಂಟ್ಸ್ ಗಳಲ್ಲಿ ಪುಣೇರಿ ತಂಡಕ್ಕಿಂತ ಮುಂದಿತ್ತು. ಯೋಧಾ 29 ರೈಡಿಂಗ್ ಪಾಯಿಂಟ್ಸ್ ಗಿಟ್ಟಿಸಿದ್ರೆ, ಪುಣೇರಿ ಪಲ್ಟನ್ 24 ಪಾಯಿಂಟ್ಸ್ ಕಲೆಹಾಕಿತು. ಆದ್ರೆ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ಯುಪಿ ಯೋಧಾ ಕೇವಲ 2 ಪಾಯಿಂಟ್ಸ್ ಪಡೆದ್ರೆ, ಪುಣೇರಿ ಪಲ್ಟನ್ 14 ಟ್ಯಾಕಲ್ ಪಾಯಿಂಟ್ಸ್ ತನ್ನದಾಗಿಸಿಕೊಂಡಿದೆ.

ಯುಪಿ ಯೋಧಾ ಪರ ಸುರೆಂದರ್ ಗಿಲ್ 16 ಪಾಯಿಂಟ್ಸ್, ಪರ್ದೀಪ್ ನರ್ವಾಲ್ 6 ಪಾಯಿಂಟ್ಸ್, ಶ್ರೀಕಾಂತ್ ಜಾಧವ್ 5 ಪಾಯಿಂಟ್ಸ್ ರೈಡಿಂಗ್ ಮೂಲಕ ಕಲೆಹಾಕಿದ್ದಾರೆ. ಪುಣೇರಿ ಪಲ್ಟನ್ ಪರ ಮೋಹಿತ್ ಗೋಯತ್ 14 ಪಾಯಿಂಟ್ಸ್, ಅಸ್ಲಾಮ್ ಇನಾಮ್ದಾರ್ 12 ಪಾಯಿಂಟ್ಸ್ ತಮ್ಮದಾಗಿಸಿಕೊಂಡ್ರು. ಪಾಯಿಂಟ್ಸ್ ಟೇಬಲ್ನಲ್ಲಿ 46 ಪಾಯಿಂಟ್ಸ್ನೊಂದಿಗೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ ಸ್ಥಾನ ಪಡೆದಿದೆ.