- ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ತೀವ್ರ ಹೋರಾಟ
- ಸಕ್ಕರೆ ಕಾರ್ಖಾನೆಗಳ ₹3,200 ಪ್ರಸ್ತಾವನೆಗೆ ರೈತರ ಸ್ಪಷ್ಟ ತಿರಸ್ಕಾರ
- ರೈತರ ಪ್ರತಿಭಟನೆಗೆ ಬಿಜೆಪಿ ಬೆಂಬಲ
Belgavi: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ 3,500 ರೂ. ನಿಗದಿಪಡಿಸಬೇಕು ಎಂಬ ಒತ್ತಾಯದೊಂದಿಗೆ ಬೆಳಗಾವಿ (Belgavi) ಜಿಲ್ಲೆಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. (protest by sugarcane growers)
ಹಸಿರು ಸೇನೆ ಮತ್ತು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿ, ಕಳೆದ ಐದು ದಿನಗಳಿಂದ ನಿರಂತರ ಮತ್ತು ಸಂಘಟಿತ ರೂಪ ಪಡೆದುಕೊಂಡಿದ್ದು, ರಾತ್ರಿ-ಹಗಲೇ ಧರಣಿ ಮುಂದುವರಿಯುತ್ತಿದೆ.
ಕಬ್ಬಿಗೆ 3,200 ರೂ. ಎಂಬ ಸಕ್ಕರೆ ಕಾರ್ಖಾನೆಗಳ ಆಫರ್‌ನ್ನು (Offer) ರೈತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಈ ಕಾಲದಲ್ಲಿ 3,200 ರೂ. ಬೆಲೆ ಯಾವ ಪ್ರಮಾಣದಲ್ಲೂ ನ್ಯಾಯಯುತವಲ್ಲ ಎಂಬ ಅಭಿಪ್ರಾಯ ರೈತರು ಹೊರಹಾಕಿದ್ದಾರೆ.
ಇನ್ನು ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಧರಣಿ ಆರಂಭವಾದ ನಂತರದಿಂದ ಹೋರಾಟದ ತೀವ್ರತೆ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗಿದೆ.
ಬೆಳೆಗಾರರು ಚಳಿ, ಗಾಳಿ, ಮಳೆ ಯಾವುದೇ ಪರಿಸ್ಥಿತಿಯೂ ಲೆಕ್ಕಿಸದೆ ಧರಣಿಯಲ್ಲಿ ತೊಡಗಿಸಿಕೊಂಡಿದ್ದಾರೆ.ತಮ್ಮ ಬೇಡಿಕೆಗೆ ನ್ಯಾಯ ಸಿಗುವವರೆಗೆ ಹೋರಾಟ ಹಿಂಪಡೆಯುವುದಿಲ್ಲವೆಂದು ಘೋಷಿಸಿದ್ದಾರೆ. (protest by sugarcane growers)
ಪ್ರತಿಭಟನಾ ಸ್ಥಳದಲ್ಲಿ ರೈತರು ತಾತ್ಕಾಲಿಕ ಅಡುಗೆ ಮನೆ, ವಾಹನ ನಿಲ್ದಾಣ, ನಿದ್ದೆ ಸೌಲಭ್ಯ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಕೆಲವರು ಕುಟುಂಬ ಸಮೇತರಾಗಿ ಸ್ಥಳದಲ್ಲೇ ರಾತ್ರಿ ಕಳೆದಿದ್ದು, ಊಟ-ನಿದ್ದೆ ಎಲ್ಲಾ ಧರಣಿ ಸ್ಥಳದಲ್ಲೇ ನಡೆಯುತ್ತಿದೆ.
ಇದರಿಂದ ಹೋರಾಟವು ಕೇವಲ ಪ್ರತಿಕ್ರಿಯಾತ್ಮಕ ಚಳವಳಿಯಷ್ಟೇ ಅಲ್ಲ, ಸಂಪೂರ್ಣ ಸಮುದಾಯದ ಹೋರಾಟವಾಗಿ ಪರಿಣಮಿಸಿದೆ.
ಗೋಕಾಕ್ ಪಟ್ಟಣದಲ್ಲಿ ಸ್ಥಳೀಯ ವಿದ್ಯಾರ್ಥಿಗಳೂ ರೈತರ ಜೊತೆ ಒಂದಾಗಿ, ಪ್ರಮುಖ ರಸ್ತೆಗಳನ್ನೇ ತಡೆಹಿಡಿದರು.
ಇದರಿಂದ ಬೆಳಗಾವಿಯನ್ನು ಸವದತ್ತಿ, ಯರಗಟ್ಟಿ ಹಾಗೂ ಮೂಡಲಗಿಗೆ ಸಂಪರ್ಕಿಸುವ ಮಾರ್ಗಗಳಲ್ಲಿ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಸಿರು ಬಾವುಟಗಳನ್ನು ಹಿಡಿದು, ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಟನ್‌ಗೆ 3,600 ರೂ ಕೊಡುತ್ತಾರೆ, ಆದರೆ ಕರ್ನಾಟಕದಲ್ಲೇ ರೈತರಿಗೆ ನ್ಯಾಯ ಸಿಗದೇಕೆ? ಎಂಬ ಪ್ರಶ್ನೆ ಪ್ರತಿಭಟನಾಕಾರರ ನಡುವೆ ದೊಡ್ಡ ಚರ್ಚೆಯ ವಿಷಯವಾಗಿದೆ.
ಬೆಳಗಾವಿ ಹಾಗೂ ಸುತ್ತಮುತ್ತಲಿನ ರಾಯಬಾಗ್, ಗೋಕಾಕ್, ಮೂಡಲಗಿ ಮತ್ತು ಅಥಣಿ ಸೇರಿದಂತೆ ಹಲವಾರು ತಾಲೂಕುಗಳಿಂದ ಸಾವಿರಾರು ರೈತರು ಹೋರಾಟಕ್ಕೆ ಒಗ್ಗೂಡಿದ್ದಾರೆ.
ಕೃಷಿ ಸಂಘಟನೆಗಳ ಜೊತೆಗೆ ವಕೀಲರ ಸಂಘ, ಮಾಜಿ ಸೈನಿಕರ ಸಂಘ, ವಿವಿಧ ಧಾರ್ಮಿಕ ಮಠಾಧೀಶರು ಹಾಗೂ ಅನೇಕ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಮಾಜಿ ಸಂಸದರಾದ ಜಗದೀಶ್ ಶೆಟ್ಟರ್ (Jagadish Shettar) ಪ್ರತಿಭಟನಾ ವೇದಿಕೆಗೆ ಭೇಟಿ ನೀಡಿ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿದರು.
ಇದೇ ವೇಳೆ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸ್ಥಳಕ್ಕೆ ಬಂದು, ತಮ್ಮ ಪಕ್ಷವು ಸಂಪೂರ್ಣವಾಗಿ ರೈತರ ಪರ ನಿಂತಿದೆ ಎಂದು ಘೋಷಿಸಿದರು.
ರಾಜಕೀಯ ವಲಯದಿಂದಲೂ ಬೆಂಬಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಬ್ಬು ಬೆಲೆ ವಿವಾದದ ಹೋರಾಟ ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತಿದೆ.