ಬೆಂಗಳೂರು: ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಜಾರಿಗೊಂಡಿರುವ ಲಾಕ್‌ಡೌನ್ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂದು ಟೀಕಿಸಿದ್ದಾರೆ.
ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ.
ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ.
ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು.
ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಸಲಹೆ ನೀಡಿದ್ದಾರೆ.