Pune: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ (Pune Porsche Car Accident Case)ದಲ್ಲಿ ಆರೋಪಿ ಅಪ್ರಾಪ್ತನ ತಂದೆ, ತಾತ ಮಾತ್ರವಲ್ಲದೆ ರಕ್ತದ ಮಾದರಿ ಬದಲಾಯಿಸಿದ ತಾಯಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮಗನನ್ನು ರಕ್ಷಿಸಲು ಯತ್ನಿಸಿದ ಆರೋಪದ ಮೇರೆಗೆ ಶುಕ್ರವಾರವಷ್ಟೇ ಪೊಲೀಸರು ಬಾಲಕನ ತಂದೆ ಮತ್ತು ತಾತನನ್ನು ಬಂಧಿಸಿದ್ದರು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಇದೀಗ ಅದರ ಬೆನ್ನಲ್ಲೇ ಇದೀಗ ಆರೋಪಿಯ ತಾಯಿಯನ್ನೂ ಬಂಧಿಸಲಾಗಿದೆ.

ಆಕೆ ಆರೋಪಿ ಬಾಲಕನ ರಕ್ತದ ಮಾದರಿಗೆ ಬದಲಾಗಿ ತನ್ನ ರಕ್ತದ ಮಾದರಿಯನ್ನು ನೀಡಲು ಯತ್ನಿಸುವ ಮೂಲಕ ಅಪಘಾತದ ಸಂದರ್ಭದಲ್ಲಿ ಆತ ಕುಡಿದಿರಲಿಲ್ಲ ಎಂದು ಸಾಬೀತು ಮಾಡಲು ಪ್ರಯತ್ನಿಸಿ ಪೋಲಿಸರ ದಾರಿತಪ್ಪಿಸಲು ನೋಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟಕ್ಕೂ ಬಾಲಾಪರಾಧಿಯ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದ ಮಾದರಿಯೊಂದಿಗೆ ಬದಲಾಯಿಸಲಾಗಿದೆ ಎಂದು ಅಪಘಾತದ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ (Amitesh Kumar) ಹೇಳಿದ್ದಾರೆ. ಬಾಲಾಪರಾಧಿಯ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಎರಡು ದಿನಗಳ ಹಿಂದೆ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅಪಘಾತದ ಸಮಯದಲ್ಲಿ ಬಾಲಕ ಮದ್ಯಪಾನ ಮಾಡಿರಲಿಲ್ಲ ಎಂದು ತೋರಿಸಲು ಆತನ ರಕ್ತದ ಮಾದರಿಗಳನ್ನು ತಾಯಿಯ ರಕ್ತ ಪಡೆದುಕೊಂಡು ಅದಲು ಬದಲು ಮಾಡಿ ಪ್ರಯೋಗಾಲಯಕ್ಕೆ ನೀಡಿದ ಆರೋಪದಲ್ಲಿ ಸಾಸೂನ್ ಜನರಲ್ ಆಸ್ಪತ್ರೆಯ ಆಗಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ವಿಶಾಲ್ ಅಗರ್ವಾಲ್ (Dr. Vishal Agarwal), ಡಾ ಅಜಯ್ ತಾವರೆ ಮತ್ತು ಡಾ ಶ್ರೀಹರಿ ಹಲ್ಮೂರು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಹಾಗೂ ಇಬ್ಬರು ವೈದ್ಯರಿಗೆ ನೀಡಲು ಬಿಲ್ಡರ್ ವಿಶಾಲ್ ಅಗರವಾಲ್ ಮನೆಯಿಂದ 3 ಲಕ್ಷ ರೂ ಲಂಚ ಕೊಂಡೊಯ್ದಿದ್ದ ಜವಾನ ಅತುಲ್ ಘಾಟ್ಕಂಬ್ಲೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.