ಬೆಂಗಳೂರು ಅ 31 : ಹೃದಯಾಘಾತದಿಂದ ಮೃತಪಟ್ಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಪುನೀತ್ ರಾಜ್ಕುಮಾರ್ಗೆ ಧೃತಿ, ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ವಿನಯ್ ರಾಜ್ಕುಮಾರ್ ಅವರು ಚಿಕ್ಕಪ್ಪನ ಅಂತ್ಯಸಂಸ್ಕಾರದ ವಿಧಿ-ವಿಧಾನ ನೆರವೇರಿಸಲಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾ ಆಕ್ರಂದನ ಮುಗಿಲುಮುಟ್ಟಿದೆ.
ಪುನೀತ್ ಹಿರಿಯ ಮಗಳು ಧೃತಿ ವಿದೇಶದಿಂದ ಬರಬೇಕಾದ್ದರಿಂದ ಅಂತ್ಯಕ್ರಿಯೆ ತಡವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಪುನೀತ್ ರಾಜ್ಕುಮಾರ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದ ಜೊತೆ ಕಳಿಸಿಕೊಡಲಾಯಿತು. ಪೊಲೀಸರು ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದ್ದಾರೆ. ರಾಜಕೀಯ ಗಣ್ಯರು, ಕುಟುಂಬಸ್ಥರು ಅಪ್ಪು ಪಾರ್ಥಿವ ಶರೀರಕ್ಕೆ ಕೊನೆಯದಾಗಿ ಗೌರವ ಸಲ್ಲಿಕೆ ಮಾಡಿದ್ದಾರೆ. ಎರಡು ನಿಮಿಷಗಳ ಮೌನಾಚರಣೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ಕುಮಾರ್ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾಗೆ ಹಸ್ತಾಂತರಿಸಿದ್ದಾರೆ.