ಬೆಂಗಳೂರು ನ 01 : ಪುನೀತ್ ರಾಜ್‌ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ತಮಿಳು ನಟ ವಿಶಾಲ್ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷದಿಂದ 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಅವರು ತಿಳಿಸಿದ್ದಾರೆ. ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ತಾನು ಹೊರುವುದಾಗಿ ತಮಿಳು ನಟ ಹೇಳಿದ್ದಾರೆ.

ಪುನೀತ್ ಅವರಿಗೆ ನಮನ ಸಲ್ಲಿಸುತ್ತ ಮಾತನಾಡಿದ ವಿಶಾಲ್ (Actor Vishal) ಇಂಥದ್ದೊಂದು ಕಾರ್ಯಕ್ರಮದಲ್ಲಿ ಮಾತನಾಡಬೇಕಾಗುತ್ತದೆ ಎನ್ನುವ ಯಾವ ಅಂದಾಜು ಇರಲಿಲ್ಲ. ಪುನೀತ್ ಅಕಾಲಿಕ ಮರಣದ ನೋವನ್ನು ಅನಿವಾರ್ಯವಾಗಿ ಅರಗಿಸಿಕೊಳ್ಳಬೇಕಾಗಿದೆ. ಪುನೀತ್ ರಾಜ್ ಕುಮಾರ್ ಸುಮಾರು 1800 ಮಕ್ಕಳ (Children)ವಿದ್ಯಾಭ್ಯಾಸದ (Education)ಹೊಣೆ ಹೊತ್ತಿದ್ದರು. ಇನ್ನುಮುಂದೆ ಈ ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ತಿಳಿಸಿದ್ದಾರೆ. ಪುನೀತ್ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ವಿಶಾಲ್ ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ವಿಶಾಲ್ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸಹಾಯ ಮಾಡುವುದರಲ್ಲಿ ಅಪ್ಪು ಸದಾ ಮುಂದು
ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಅವರು ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಗೆಯ ಬಾಲಕಿ ಪ್ರೀತಿ ಅವರಿಗೆ ಸಹಾಯ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ. ಕುಮಾರ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾದ ಪ್ರೀತಿ 2017ರಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
ಆಗ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಈ ದಂಪತಿ ಮಾಧ್ಯಮಗಳ ಮೂಲಕ ಸಹಾಯ ಯಾಚಿಸಿದ್ದರು. ಆ ವೇಳೆ ಪುನೀತ್ ಅವರು ನೆರವು ನೀಡಿದ್ದರು. ‘ಆ ವೇಳೆ ಭೇಟಿ ನೀಡಿದ ಪುನೀತ್ ರಾಜ್‌ಕುಮಾರ್ ಆ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಪೂರ್ತಿ ಬಿಲ್ 12.50 ಲಕ್ಷವನ್ನು ಭರಿಸಿದ್ದರು’ ಎಂದು ಪ್ರೀತಿ ಅವರ ಮಾವ ಹನುಮಂತಪ್ಪ ತಿಳಿಸಿದರು.
ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಕೂಡ ಗೆಳೆಯನ ಸ್ಮರಿಸಿದ್ದಾರೆ.