Why fear CBI as “the mind of a thief is hollow”? – Ashok’s question to Siddhu.
Bengaluru: “ಕಳ್ಳನ ಮನಸ್ಸು ಹುಳ್ಳ-ಹುಳ್ಳಗೆ” ಎಂಬಂತೆ ಸಿಬಿಐ ಬಗ್ಗೆ ಭಯವೇಕೆ? ನಾನು ಯಾವುದೇ ತನಿಖೆಗೂ ಸಿದ್ಧ, ಯಾವ ತನಿಖೆಗೂ ಹೆದರಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಈಗ ರಾಜ್ಯದಲ್ಲಿ ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನ ಸಂಪುಟ ಸಭೆಯಲ್ಲಿ ಹಿಂಪಡೆಯುವ ಮೂಲಕ ತಾವು ತಪ್ಪಿತಸ್ಥರು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ (R Ashok) ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣ (Muda Scam) ಕುರಿತು ಮಾತನಾಡಿದ ಅವರು, ತಮ್ಮದೇನೂ ತಪ್ಪಿಲ್ಲದಿದ್ದರೆ ಸಿಬಿಐ ತನಿಖೆ ಬಗ್ಗೆ ಭಯವೇಕೆ ಸಿದ್ದರಾಮಯ್ಯನವರೇ? ಈ ರೀತಿ ಅಡ್ಡದಾರಿ ಹುಡುಕಿ ಅನಿವಾರ್ಯವಾದದ್ದನ್ನ ಮುಂದೂಡಿ ರಾಜ್ಯದ ಜನರ ಮುಂದೆ ಇನ್ನಷ್ಟು ಸಣ್ಣವರಾಗುವ ಬದಲು, ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ.
ನಿಮ್ಮ ಸಲಹೆಗಾರರು, ವಕೀಲರು, ಸುತ್ತ ಮುತ್ತ ಇರುವ ಹಿತಶತೃಗಳು ಈಗಾಗಲೇ ನಿಮ್ಮ ದಾರಿ ತಪ್ಪಿಸಿ ಮರ್ಯಾದೆ ಕಳೆದಿದ್ದಾರೆ. ಈಗ ಮತ್ತೊಮ್ಮೆ ಅವರನ್ನು ನಂಬಿ ತಪ್ಪು ಹೆಜ್ಜೆ ಇಡಬೇಡಿ. ರಾಜೀನಾಮೆ ನೀಡಿ ತನಿಖೆ ಎದುರಿಸುವುದು ಒಂದೇ ತಮ್ಮ ಮುಂದಿರುವ ಏಕೈಕ ದಾರಿ ಎಂದಿದ್ದಾರೆ. ರಾಜ್ಯ ಸರ್ಕಾರದ ಅವ್ಯವಹಾರಗಳು ಮತ್ತು ಅಕ್ರಮಗಳ ಬಗ್ಗೆ ಪತ್ರ ಮುಖೇನ ಸರ್ಕಾರವನ್ನು ಪ್ರಶ್ನೆ ಮಾಡಿ ತಮ್ಮ ಸಂವಿಧಾನದತ್ತ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಘನತೆವೆತ್ತ ರಾಜ್ಯಪಾಲರಿಗೆ ಅಂಕುಶ ಹಾಕಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಹಿಟ್ಲರ್ (Hitler) ರೀತಿ ವರ್ತಿಸುತ್ತಿದ್ದಾರೆ.
ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿದ್ದರಾಮಯ್ಯನವರು ಈಗ ಸಿಬಿಐ (CBI), ರಾಜ್ಯಪಾಲರ ಮೇಲೆ ತಮ್ಮ ಹಿಟ್ಲರ್ ಧೋರಣೆ ಪ್ರದರ್ಶನ ಮಾಡುತ್ತಿದ್ದಾರೆ.
ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ದರಾಮಯ್ಯನವರು ಒಂದು ವೇಳೆ ಅವಕಾಶವಿದ್ದದ್ದರೆ ತಮ್ಮ ವಿರುದ್ಧ ತೀರ್ಪು ನೀಡುತ್ತಿರುವ ನ್ಯಾಯಾಲಯಗಳಿಗೂ ಮತ್ತು ನ್ಯಾಯಾಧೀಶರಿಗೂ ಅಂಕುಶ ಹಾಕುತಿದ್ದರೇನೋ ಅನ್ನಿಸುತ್ತಿದೆ ಎಂದಿದ್ದಾರೆ.