1852 ರಲ್ಲಿ ಮೌಂಟ್ ಎವರೆಸ್ಟ್(Mount Everest) ಎತ್ತರವನ್ನು ಲೆಕ್ಕ ಹಾಕಿದ ಮೊದಲ ವ್ಯಕ್ತಿ ರಾಧಾನಾಥ್ ಸಿಕ್ದರ್(Radhanath Sikdar).
ಹಿಂದೂ ಕಾಲೇಜಿನ ಗಣಿತಶಾಸ್ತ್ರದ ಈ ಬುದ್ದಿವಂತ ವಿದ್ಯಾರ್ಥಿಯು, ನ್ಯೂಟೋನಿಯನ್ ಗಣಿತ ಮತ್ತು ಭೌತಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದರು.
ಜೊತೆಗೆ, ಎರಡು ವೃತ್ತಗಳಿಗೆ ಸಾಮಾನ್ಯ ಸ್ಪರ್ಶಕವನ್ನು ಎಳೆಯುವ ಹೊಸ ವಿಧಾನವನ್ನು ಕಂಡುಹಿಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

1831 ರಲ್ಲಿ ಭಾರತದ ಸರ್ವೇಯರ್-ಜನರಲ್ ಜಾರ್ಜ್ ಎವರೆಸ್ಟ್ ಗ್ರೇಟ್, ತ್ರಿಕೋನ ಮಿತಿಯ ಸಮೀಕ್ಷೆಯಲ್ಲಿ ಭಾಗವಹಿಸಲು ಪರಿಣಿತಿ ಪಡೆದ ಒಬ್ಬ ಗಣಿತಶಾಸ್ತ್ರಜ್ಞನನ್ನು ಹುಡುಕುತ್ತಿದ್ದರು.
ಆಗ ಸಿಕ್ದರ್ ಅವರು ತಮ್ಮ 19ನೇ ವಯಸ್ಸಿನಲ್ಲಿ, ಆ ಹುದ್ದೆಗೆ ನೇಮಕಗೊಂಡರು. ಅವರ ಸಂಬಳ ತಿಂಗಳಿಗೆ 30 ರೂ. ನಂತರ, 1851 ರಲ್ಲಿ, ಸಿಕ್ದರ್ ಮುಖ್ಯ ಹುದ್ದೆಗೆ ಬಡ್ತಿ ಪಡೆದರು.
1852 ರಲ್ಲಿ, ಜಾರ್ಜ್ ಎವರೆಸ್ಟ್ನ ಉತ್ತರಾಧಿಕಾರಿ ಆಂಡ್ರ್ಯೂ ಸ್ಕಾಟ್ ವಾ, ‘ಪೀಕ್ XV’ ಪರ್ವತಗಳ ಎತ್ತರವನ್ನು ಅಳೆಯಲು ಸಿಕ್ದರ್ಗೆ ಕೇಳಿದರು. ಸಿಕ್ದರ್ ಆರು ಅವಲೋಕನಗಳಿಂದ ಡೇಟಾವನ್ನು ಬಳಸಿದರು ಮತ್ತು ‘ಪೀಕ್ XV’ ಎಂಬ ಶಿಖರದ ಎತ್ತರವನ್ನು ಲೆಕ್ಕ ಹಾಕಿದರು ಮತ್ತು ಇದು ಕಾಂಚನ ಜುಂಗಾಕ್ಕಿಂತ ಎತ್ತರವಾಗಿದೆ ಎಂದು ಹೇಳಿದರು.
ಅಲ್ಲಿಯವರೆಗೂ ಕಾಂಚನ ಜುಂಗಾವೇ ವಿಶ್ವದ ಅತಿ ಎತ್ತರದ ಪರ್ವತ ಶಿಖರವೆಂದು ಪರಿಗಣಿಸಲ್ಪಟ್ಟಿತು. ಆದರೆ ಸಿಕ್ದರ್ ಅವರು ‘ಪೀಕ್ XV’ ನ ಎತ್ತರವನ್ನು ನಿಖರವಾಗಿ 29,000 ಅಡಿಗಳು ಎಂದು ಲೆಕ್ಕ ಹಾಕಿದರು, ನಂತರ 1856 ರಲ್ಲಿ ಇದರ ಅಧಿಕೃತ ಎತ್ತರವನ್ನು 29,002 ಅಡಿ ಎಂದು ಘೋಷಿಸಲಾಯಿತು. https://vijayatimes.com/women-lived-as-men-for-30-years/
‘ಪೀಕ್ XV’ ಗೆ ಹಿಂದಿನ ಸರ್ವೇಯರ್-ಜನರಲ್ ಎವರೆಸ್ಟ್ ಅವರ ಹೆಸರನ್ನೇ ನೀಡಲಾಯಿತು. ಹೀಗೆ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಕ್ದರ್ 1862 ರಲ್ಲಿ ನಿವೃತ್ತಿ ಪಡೆದರು.
ನಿವೃತ್ತಿಯ ಎರಡು ವರ್ಷಗಳ ನಂತರ 1864 ರಲ್ಲಿ ಜರ್ಮನ್ ಫಿಲಾಸಫಿಕಲ್ ಸೊಸೈಟಿ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿತು.

ಸಿಕ್ದರ್ ಮಹಿಳೆಯರ ಶಿಕ್ಷಣಕ್ಕಾಗಿ ಬಂಗಾಳಿ ಜರ್ನಲ್ ಮಾಸಿಕ್ ಪತ್ರಿಕಾವನ್ನು ಕೂಡ ಸ್ಥಾಪಿಸಿದರು. ಅದೊಂದು ದೊಡ್ಡ ಸಾಧನೆಯೇ ಸರಿ.
ಆದರೆ ಅವರ ಸಾಧನೆಯನ್ನು ಗುರುತಿಸಿ, ವಿಶ್ವದ ಅತಿ ಎತ್ತರದ ಶಿಖರಕ್ಕೆ ಅವರ ಹೆಸರಿಡಬೇಕಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.
- ಪವಿತ್ರ