ಭಾರತ ಕಂಡ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರಾದ ಬಜಾಜ್ ಆಟೋ ಕಂಪನಿಯ ಮಾಜಿ ಅಧ್ಯಕ್ಷರಾದ ರಾಹುಲ್ ಬಜಾಜ್ (83)ಅವರು ನಿಧನರಾಗಿದ್ದಾರೆ. ಹೃದಯ ಮತ್ತು ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪುರವೇಜ್ ಗ್ರಾಂಟ್ ಹೇಳಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ರಾಹುಲ್ ಬಜಾಜ್ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಹುಲ್ ಬಜಾಜ್ ಜೂನ್ 10 ರಂದು 1938ರಂದು ಕಲ್ಕತ್ತಾದಲ್ಲಿ ಜನಿಸಿದ್ದರು. ರಾಹುಲ್ ಬಜಾಜ್ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಜಮ್ನಾಲಾಲ್ ಬಜಾಜ್ ಅವರ ಮೊಮ್ಮಗ. ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಓದಿದ ಅವರು, ಬಜಾಜ್ ಎಲೆಕ್ಟ್ರಿಕಲ್ಸ್ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದಿದ್ದರು. ಜೊತೆಗೆ 1960ರಲ್ಲಿ ಹಾವರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದರು. ರಾಹುಲ್ ಬಜಾಜ್ ಅವರು 40 ವರ್ಷಗಳ ಕಾಲ ಬಜಾಜ್ ಗ್ರೂಪ್ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಪ್ರಸ್ತುತ ಬಜಾಜ್ ಸಂಸ್ಥೆಯ ಎಮೆರಿಟಸ್ ಅಧ್ಯಕ್ಷರೂ ಕೂಡ ಆಗಿದ್ದರು. ಬಜಾಜ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಬಜಾಜ್ ತನ್ನದೇ ಆದ ಹೆಸರು ಗಳಿಸಲು ರಾಹುಲ್ ಬಜಾಜ್ ಅವರ ಸಾಧನೆ ಅಪ್ರಮತಿಮವಾಗಿದೆ. ವಯಸ್ಸು ಮತ್ತು ಖಾಯಿಲೆ ಹಿನ್ನೆಲೆಯಲ್ಲಿ ಕಳೆದ ವರ್ಷ ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಾರು 5 ದಶಕಗಳ ಕಾಲ ಬಜಾಜ್ ಸಂಸ್ಥೆಯನ್ನು ಬೆಳೆಸಿದ್ದ ರಾಹುಲ್ ಅವರು ಕಠಿಣ ಪರಿಶ್ರಮದ ಸಾಧನೆ ಹಾದಿ ರೋಚಕ.
ರಾಹುಲ್ ಬಜಾಜ್ ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ರಾಹುಲ್ ಬಜಾಜ್ ಅವರಿಗೆ 2001 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.
“ದೇಶದ ಖ್ಯಾತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಜಿ ಅವರ ನಿಧನದ ದುಃಖದ ಸುದ್ದಿ. ಅವರು ಆರ್ಥಿಕ ರಂಗದಲ್ಲಿ ದೇಶದ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗೆ ನನ್ನ ಹೃದಯಪೂರ್ವಕ ಶ್ರದ್ಧಾಂಜಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಬಜಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, “ಯಶಸ್ವಿ ಉದ್ಯಮಿ, ಲೋಕೋಪಕಾರಿ ಮತ್ತು ಬಜಾಜ್ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಜಿ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ.