ತಮಿಳುನಾಡು, ಜ. 30: ಸದಾಕಾಲವೂ ರಾಜಕೀಯ ಒತ್ತಡದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡಿನ ಖ್ಯಾತ ಆಹಾರ ಪ್ರಿಯರ ಯೂಟ್ಯೂಬ್ ಚಾನೆಲ್ ವಿಲೇಜ್ ಕುಕ್ಕಿಂಗ್ ಚಾನೆಲ್ನಲ್ಲಿ ಪಾಲೊಂಡು ಮಶ್ರೂಮ್ ಬಿರಿಯಾನಿ ಸವಿದಿದ್ದಾರೆ.
ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚಿಗೆ ತಮಿಳುನಾಡು ಪ್ರವಾಸ ಕೈಗೊಂಡಿದ್ದ ಅವರು, ಹಳ್ಳಿಯೊಂದರಲ್ಲಿ ನಡೆಯುವ ಅಡುಗೆ ತಯಾರಿ ಕಾರ್ಯಕ್ರಮದ ಶೂಟ್ನಲ್ಲಿ ಪಾಲ್ಗೊಂಡಿದ್ದಾರೆ.
ಹದಿನಾಲ್ಕು ನಿಮಿಷಗಳ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಅಡುಗೆ ಮಾಡಲೂ ಸಹಾಯ ಮಾಡಿದ್ದಾರೆ. ರಾಯ್ತಾ ಸಿದ್ಧಪಡಿಸಲೂ ತಂಡಕ್ಕೆ ನೆರವಾಗಿದ್ದಾರೆ.
ತಮ್ಮನ್ನು ಸ್ವಾಗತಿಸುವ ತಂಡಕ್ಕೆ ವಣಕ್ಕಂ ಎಂದು ತಮಿಳಿನಲ್ಲಿ ನಮಸ್ಕಾರ ಹೇಳುವ ರಾಹುಲ್ ಗಾಂಧಿ ಅವರು ಅಣಬೆಯಿಂದ ತಯಾರಿಸಿದ ಬಿರಿಯಾನಿಯನ್ನು ರಾಯ್ತಾ ಜೊತೆ ಸವಿದರು.
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರೂ ಸಹ ರಾಹುಲ್ ಗಾಂಧಿ ಅವರೊಟ್ಟಿಗೆ ಇದ್ದರು. ರಾಹುಲ್ ಗಾಂಧಿ ಅವರ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.