ನವ ದೆಹಲಿ, ಏ. 29: ಕೊರೋನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಮೇ.01 ರಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಇತ್ತೀಚೆಗೆ ತಿಳಿಸಿತ್ತು. ಆದರೆ, ಈ ಲಸಿಕೆಗೆ ಫಲಾನುಭವಿಗಳು ಹಣ ನೀಡುವುದು ಕಡ್ಡಾಯವಾಗಿದೆ. ಹೀಗಾಗಿ ಈ ಕುರಿತು ಉಚಿತ ಲಸಿಕೆಗೆ ಒತ್ತಾಯ ಮಾಡಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. “ಈ ಬಾರಿಯಾದರೂ ಭಾರತೀಯರಿಗೆ ಲಸಿಕೆ ಉಚಿತವಾಗಿ ಸಿಗುವಂತಾಗಲಿ. ಜನ ಈ ಲಸಿಕೆಯನ್ನು ಉಚಿತವಾಗಿ ಪಡೆಯುತ್ತಾರೆಂದು ನಾವು ಭಾವಿಸೋಣ” ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರಲು ಮುಂದಾಗಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈಗಾಗಲೆ ಲಸಿಕೆಯನ್ನು ಖರೀದಿಸುವ ಹಾಗೂ ಅದನ್ನು ನೀಡುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಮೂಲಕ ಜವಾಬ್ದಾರಿಯಿಂದ ಮುಕ್ತವಾಗಿದೆ. ಈ ನಡುವೆ ಕರ್ನಾಟಕ, ಕೇರಳ ಸೇರಿದಂತೆ ಸುಮಾರು 11 ರಾಜ್ಯಗಳು ಈಗಾಗಲೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವುದು ಉಲ್ಲೇಖಾರ್ಹ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 60 ಸಾವಿರ ಕೋಟಿ ರೂ. ಮೌಲ್ಯದಲ್ಲಿ ಹೊಸ ಸಂಸತ್ ನಿರ್ಮಿಸುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕೊರೋನಾ ಸಂಕಷ್ಟದ ಕಾಲದಲ್ಲಿ ಜನ ಆಸ್ಪತ್ರೆಯಲ್ಲಿ ಬೆಡ್ ಸಹ ಸಿಗದೆ ಒದ್ದಾಡುತ್ತಿರುವ ಇಂತಹ ಸಂದರ್ಭದಲ್ಲಿ ಇಷ್ಟು ದುಬಾರಿ ಯೋಜನೆಯ ಅಗತ್ಯ ಏನಿದೆ? ಹೀಗಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಆ ಹಣವನ್ನು ವೈದ್ಯಕೀಯ ಸೌಲಭ್ಯಗಳ ಪೂರೈಕೆಗೆ ಬಳಸಿ ಎಂದು ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ.
ಈ ನಡುವೆ ಬುಧವಾರ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಗುಣ ಆಗಿರುವವರು 2,69,507 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,83,76,524ಕ್ಕೆ ಏರಿಕೆ ಆಗಿದೆ.