ತಿರುವನಂತಪುರಂ, ಏ. 05: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇರಳದಲ್ಲಿ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೇ ನಿನ್ನೆ ಪ್ರಚಾರದ ಕೊನೇ ದಿನವಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು, ಹೆಲಿಪ್ಯಾಡ್ಗೆ ತೆರಳಲು ಆಟೋರಿಕ್ಷಾ ಬಳಸಿದ್ದಾರೆ. ಸತತವಾಗಿ ಏರುತ್ತಿರುವ ಇಂಧನ ಬೆಲೆಯನ್ನು ವಿರೋಧಿಸಲು ಅವರು ಈ ರೀತಿ ಮಾಡಿದ್ದು, ಸದ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ಕೇರಳದ ನೆಮಾಮ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಅವರು ಸಂಜೆ ಸ್ಥಳಕ್ಕೆ ಆಟೋ ಕರೆಸಿ ಅಚ್ಚರಿ ಮೂಡಿಸಿದರು. ನೆಮಾಮ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕೆ.ಮುರಳೀಧರನ್ ಸ್ಪರ್ಧಿಸಿದ್ದಾರೆ. 2016ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ನೆಮಾಮ್ಗೆ ಬರುವಾಗಲೂ ಆಟೋದಲ್ಲೇ ಬಂದಿರುವ ರಾಹುಲ್ ಗಾಂಧಿ, ರೋಡ್ ಶೋ ನಡೆಸಿದ ಬಳಿಕ ಮಾತನಾಡಿ, ನಾನು ಬಂದ ಆಟೋ ಚಾಲಕನನ್ನು ಮಾತನಾಡಿಸಿದೆ. ಅವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಪಡುತ್ತಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಹಣವನ್ನೆಲ್ಲ ಅವರ ಸ್ನೇಹವಲಯಕ್ಕೆ ಮೀಸಲಾಗಿಡುತ್ತಿದೆ. ಇಷ್ಟಾದ ಮೇಲೆ ಕೂಡ ಇಲ್ಲಿಗೆ ಬಂದು ನಿಮ್ಮ ಬಳಿ ಮತ ಕೇಳುತ್ತಾರಲ್ಲ? ಅವರಿಗೆ ಎಷ್ಟು ಧೈರ್ಯ ಇರಬೇಡ ! ಎಂದು ಪ್ರಶ್ನಿಸಿದರು. ಅಲ್ಲಿಂದ ಕಲಪೆಟ್ಟಾದ ಹೆಲಿಪ್ಯಾಡ್ಗೆ ತೆರಳುವಾಗಲೂ ಆಟೋವನ್ನು ಬಳಸಿದ್ದಾರೆ.