ಬೆಂಗಳೂರು ನ 23 : ಮಳೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದರೆ 5 ಲಕ್ಷ ರೂ. ಹಾಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾದರೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯಲಹಂಕದ ವಿವಿಧ ಭಾಗಗಳಲ್ಲಿ ಮಳೆಯಿಂದಾದ ನಷ್ಟ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸುಮಾರು 10 ಕಿ.ಮೀ ಮುಖ್ಯರಸ್ತೆ, 20 ಕಿ.ಮೀ ಅಡ್ಡ ರಸ್ತೆಗಳು ಹಾಳಾಗಿವೆ. ಎನ್ಜಿಟಿ ಆದೇಶದಂತೆ ಹಲವಾರು ಅಪಾರ್ಟ್ಮೆಂಟ್ಗಳು ಬಫರ್ ಝೋನ್ನಲ್ಲಿರುವುದರಿಂದ ಏನು ಸಮಸ್ಯೆ ಇಲ್ಲ. ಈ ಹಿಂದೆ ರಾಜಕಾಲುವೆ ಮೇಲೆ ಮನೆ ಕಟ್ಟೋಕೆ ಅವಕಾಶ ಕೊಟ್ಟಿರುವುದೇ ಈ ರೀತಿ ಅವಾಂತರಕ್ಕೆ ಕಾರಣ ಎಂದರು.
ಧಾರಾಕಾರ ಮಳೆಗೆ ಯಲಹಂಕ ಸಮೀಪದ ಸುಮಾರು 300 ಎಕರೆ ವಿಸ್ತೀರ್ಣವಿರುವ ಅಮ್ಮಾನಿ ಕೆರೆ ಕಟ್ಟೆ ಒಡೆದು ಕೋಗಿಲು ಕ್ರಾಸ್ ಬಳಿಯಿರುವ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ್ಟ್ಮೆಂಟ್ನ ಬೆಸ್ಮೆಂಟ್ ಬೀಚ್ನಂತಾಗಿದ್ದು, ವಾಹನಗಳ ಇಂಜಿನ್ ಕೆಟ್ಟು ಹೋಗುವ ಭೀತಿ ಎದುರಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ವಾಸವಿರುವ ಕೇಂದ್ರೀಯ ವಿಹಾರದಲ್ಲಿ 4 ರಿಂದ 5 ಅಡಿ ನೀರು ನಿಂತಿದ್ದು, ವಿದ್ಯುತ್ ಕಡಿತಗೊಳಿಸಿ ಬೋಟ್ ಮೂಲಕ ಜನರನ್ನು ರಕ್ಷಣೆ ಮಾಡಲಾಗಿದೆ.