ನವದೆಹಲಿ, ಡಿ. 24: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ರೈತರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರವಾಗುತ್ತಿದೆ. ಈಗಾಗಲೇ ವಿವಿಧ ರೀತಿಯ ಹೋರಾಟ, ಪ್ರತಿಭಟನೆಗಳನ್ನು ನಡೆಸುತ್ತಿರುವ ರೈತರು, ಸರ್ಕಾರ ತನ್ನ ಹಠವನ್ನು ಬಿಟ್ಟು ರೈತರ ಬೇಡಿಕೆಗಳನ್ನು ಒಪ್ಪಿ ವಾಸ್ತವ ಪ್ರಸ್ತಾವನೆ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.
ತಮ್ಮ ಮುಖ್ಯ ಅಜೆಂಡಾದಲ್ಲಿ ರಾಜಿಯಾಗದೆ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ ಎಂದು ರೈತರು ಹೇಳುತ್ತಿದ್ದಾರೆ. ತಮ್ಮ ಮೇಲಿನ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನ್ನು ಭೇಟಿ ಮಾಡಿದ ನಂತರ ರೈತ ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾವು ಮಾತುಕತೆಗೆ ಸಿದ್ಧರಿದ್ದೇವೆ, ಆದರೆ ಕೇಂದ್ರ ಸರ್ಕಾರ ನಮ್ಮ ಮುಂದೆ ಮುಕ್ತವಾಗಿ ಮಾತುಕತೆಗೆ ಬರಬೇಕು ಎಂಬ ಬೇಡಿಕೆಯನ್ನಿಟ್ಟಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಕಾರ್ಯ ರಚನೆ, ನಿಯಂತ್ರಣ, ವಿದ್ಯುತ್ ತಿದ್ದುಪಡಿ(ವಿಧೇಯಕ) ಮತ್ತು ವಾಯು ಗುಣಮಟ್ಟದ ವಿಧೇಯಕಕ್ಕೆ ಸಂಬಂಧಿಸಿದಂತೆ ತಮಗೆ ಸರ್ಕಾರದ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.