ಬೆಂಗಳೂರು, ಡಿ. 03: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ. ಸಿ ಪಾಟೀಲ್ ಹೇಳಿಕೆ ವಿವಾದ ಎಬ್ಬಿಸಿದೆ. ಕೊಡಗಿನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಶ್ರಮವಹಿಸಿ ಸಮಸ್ಯೆಗಳಿಂದ ಹೊರಬರಬೇಕು. ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಅವರ ಈ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಯಿತು. ಇನ್ನು ಕಾಂಗ್ರಸ್ ಇದರ ಬಗ್ಗೆ ಸರಣಿ ಟ್ವೀಟ್ ಮೂಲಕ ಬಿ. ಸಿ ಪಾಟೀಲ್ ವಿರುದ್ಧ ಹರಿಹಾಯ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದಾದರೆ, ರೈತರ ಮೇಲೆ ಗುಂಡು ಹಾರಿಸುವ, ಲಾಠಿ ಚಾಜ್F ಮಾಡುವ, ಕರಾಳ ಕಾಯ್ದೆ ಮೂಲಕ ಅವರ ಬದುಕಿಗೆ ಕೊಳ್ಳಿ ಇಡುತ್ತಿರುವ ಬಿಜೆಪಿಗರು ದೊಡ್ಡ ಶೂರರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಟ್ವೀಟ್ ಸರಣಿಗಳ ಬೆನ್ನಲ್ಲೇ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಹೇಳಿರುವುದು ನಾನು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ.ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ. ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು ಎಂದು.
ರೈತರು ಕಷ್ಟನಷ್ಟಗಳನ್ನು ಜಯಿಸಬೇಕು. ಕಷ್ಟಗಳು ಇಂದು ಇದ್ದಂತೆ ನಾಳೆ ಇರುವುದಿಲ್ಲ. ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತದೆ. ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ಕೋಲಾರ ರೈತರು ಮಾದರಿ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.