ICMRಗೆ ಮಾಜೀ ಹಿರಿಯ ಪತ್ರಕರ್ತ(Senior Journalist) ರಾಜರಾಂ ತಲ್ಲೂರು(Rajarao Tallur) ಅವರು ಬರೆದಿರುವ ಪತ್ರ ಹೀಗಿದೆ.
ನಾಡಿನ ಎಲ್ಲೆಡೆ 30-55 ಪ್ರಾಯವರ್ಗದಲ್ಲಿ ಹೃದಯಾಘಾತದ ಪ್ರಮಾಣ ಒಂದೇ ಸವನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮತ್ತು ಅದಕ್ಕೆ ಸರ್ಕಾರದ-ಆರೋಗ್ಯಾಡಳಿತದ ಕಡೆಯಿಂದ ಯಾವುದೇ ಗಂಭೀರ ಪ್ರಯತ್ನಗಳು ನಡೆದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರದಿರುವ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿರುವ ICMRನ ಮಹಾನಿರ್ದೇಶಕರಿಗೆ ದೇಶದ ಜವಾಬ್ದಾರಿಯುತ ನಾಗರಿಕನಾಗಿ ಒಂದು ಪತ್ರ ಬರೆದಿದ್ದೇನೆ.
ಇವರಿಗೆ,
ಶ್ರೀ. ರಾಜೇಶ್ ಭೂಷಣ್,
ಮಾನ್ಯ ಕಾರ್ಯದರ್ಶಿಗಳು, ಆರೋಗ್ಯ ಸಂಶೋಧನಾ ಇಲಾಖೆ
ಮತ್ತು ಮಹಾನಿರ್ದೇಶಕರು, ಭಾರತೀಯ ವೈದ್ಯವಿಜ್ಞಾನ ಸಂಶೋಧನಾ ಸಂಸ್ಥೆ (ICMR)
ವಿ. ರಾಮಲಿಂಗಸ್ವಾಮಿ ಭವನ, ಅನ್ಸಾರಿ ನಗರ, ಹೊಸದಿಲ್ಲಿ – 110029
ಮಾನ್ಯರೆ,
ಕಳೆದ ಎರಡೂವರೆ ವರ್ಷಗಳಲ್ಲಿ ಕೋವಿಡ್ ೧೯ ಜಗನ್ಮಾರಿಯ ನಿರ್ವಹಣೆಯಲ್ಲಿ ಭಾರತೀಯ ವೈದ್ಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಪಾತ್ರವನ್ನು ನಾನು ಶ್ಲಾಘಿಸುತ್ತೇನೆ. ಅಕಸ್ಮಾತ್ ಆಗಿ ಬಂದೆರಗಿದ ಜಗನ್ಮಾರಿಯನ್ನು ಲಭ್ಯವಿರುವ ಸೀಮಿತ ಸಂಪನ್ಮೂಲಗಳ ಜೊತೆಗೆ ನಿಭಾಯಿಸಲು ICMR ತನ್ನಿಂದಾದ ಪ್ರಯತ್ನಗಳನ್ನು ಮಾಡಿದೆ. ICMR ತಾನು 1911ರಲ್ಲಿ ಸ್ಥಾಪನೆ ಆದ ಬಳಿಕ (ಸ್ವತಂತ್ರ ಭಾರತದಲ್ಲಿ 1949ರಲ್ಲಿ), ದೇಶದ ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ತೋರಿಸಿರುವ ಅದ್ವಿತೀಯ ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ.

ಇಂದು ನಾನು ಒಂದು ಕಳವಳದೊಂದಿಗೆ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ದೇಶದಾದ್ಯಂತ, ಅದರಲ್ಲೂ ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ನಡೆದಿರುವ ಒಂದು ವಿಲಕ್ಷಣವಾದ ಬೆಳವಣಿಗೆಯತ್ತ ನಾನು ನಿಮ್ಮ ಗಮನವನ್ನು ಸೆಳೆಯಬಯಸುತ್ತೇನೆ. ICMR ಈ ಘಟನೆಗೆ ಸಂಬಂಧಿಸಿದಂತೆ ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಾಚರಿಸುವುದು ಅತ್ಯಗತ್ಯ ಎಂದು ನನಗನ್ನಿಸಿದ ಹಿನ್ನೆಲೆಯಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ.
ಕೋವಿಡ್ ಜಗನ್ಮಾರಿಯ ಅವಧಿಯಲ್ಲಿ, ಕೋವಿಡ್ ಕಾರಣಕ್ಕಾಗಿ ಸಂಭವಿಸಿದ ಜೀವನಷ್ಟಗಳ ಜೊತೆಜೊತೆಗೇ ದೊಡ್ಡ ಪ್ರಮಾಣದಲ್ಲಿ ಹೃದಯಾಘಾತದ ಕಾರಣಕ್ಕೆ (MI) ಸಾವುಗಳು ಸಂಭವಿಸಿವೆ. ಈಗ ಕೋವಿಡ್ ತೀವ್ರತೆ ಕಡಿಮೆ ಆದ ಬಳಿಕವೂ ಈ ಸಾವಿನ ಸರಣಿ ಮುಂದುವರಿದಿದ್ದು, ದೇಶದೊಳಗೆ ದೊಡ್ಡ ಸಂಖ್ಯೆಯಲ್ಲಿ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ, 30-55ರ ಉತ್ಪಾದಕ ಪ್ರಾಯ ವರ್ಗದಲ್ಲೇ ಈ ರೀತಿಯ ಸಾವುಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲೇ ಈ ಪ್ರದೇಶದ ಪತ್ರಿಕೆಗಳಲ್ಲಿ ಕನಿಷ್ಠ 5-6 ಇಂತಹ ಸಾವಿನ ವರದಿಗಳು ನನಗೆ ಓದಲು ಸಿಕ್ಕಿವೆ. ದೇಶದಾದ್ಯಂತವೂ ಇದೇ ಪರಿಸ್ಥಿತಿ ಇದೆ ಎಂಬುದು ನನ್ನ ಅಭಿಪ್ರಾಯ. ಹೀಗೆ ಅನಿರೀಕ್ಷಿತವಾಗಿ ನಿಧನ ಹೊಂದಿದವರೆಲ್ಲರೂ ಎಳೆಯರು ಮತ್ತು ಆರೋಗ್ಯವಂತರಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು.
ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ICMR ನಂತಹ ಸುಸಜ್ಜಿತ ಸಂಶೋಧನಾ ಸಂಸ್ಥೆ ಈ ವಿಚಾರದಲ್ಲಿ ಆಳವಾಗಿ ಅಧ್ಯಯನ/ಸಂಶೋಧನೆ ನಡೆಸಿ, ಇದಕ್ಕೆ ಕಾರಣವನ್ನು ಪತ್ತೆಹಚ್ಚುವುದು ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಜನಸಾಮಾನ್ಯರಲ್ಲಿ ಈ ರೀತಿಯ ಹಠಾತ್ ಸಾವಿನ ಬಗ್ಗೆ ಹಲವು ಅಪನಂಬಿಕೆಗಳು ತಲೆ ಎತ್ತಿವೆ. ಈ ರೀತಿಯ ಸಾವುಗಳಿಗೆ ಕೋವಿಡೋತ್ತರ ದೀರ್ಘಕಾಲಿಕ ಪರಿಣಾಮಗಳು ಅಥವಾ ಕೋವಿಡ್ ಲಸಿಕೆ ಅಥವಾ ಮಾನಸಿಕ ಒತ್ತಡ/ಜೀವನ ಶೈಲಿ ಕಾರಣ ಆಗಿರಬಹುದೆಂಬ ಸಂಶಯಗಳು ಜನಮನದಲ್ಲಿ ಬೆಳೆಯುತ್ತಿವೆ.

ಈ ಮರಣದ ಆಘಾತಗಳು ಅದಕ್ಕೆ ತುತ್ತಾದವರ ಕುಟುಂಬಗಳಲ್ಲಿ ಸಾಮಾಜಿಕ, ಆರ್ಥಿಕ ಸಂಕಟಗಳಿಗೆ ಕಾರಣವಾಗುತ್ತಿವೆ. ಯಾಕೆಂದರೆ, ಹೀಗೆ ಮೃತಪಟ್ಟಿರುವ ಹೆಚ್ಚಿನವರು ತಮ್ಮ ಕುಟುಂಬಗಳ ವರಮಾನದ ಆಧಾರಸ್ಥಂಭಗಳಾಗಿದ್ದವರು. ಇಂತಹ ಪ್ರಕರಣಗಳು ಹೆಚ್ಚಾದಲ್ಲಿ ಇದು ಸಾಮಾಜಿಕವಾಗಿ-ಆರ್ಥಿಕವಾಗಿ ಕ್ಷೋಭೆಗೆ ಕಾರಣವಾದರೂ ಅಚ್ಚರಿ ಇಲ್ಲ.
ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದಂತೆ ದೇಶದ ಅಧ್ವರ್ಯು ಸಂಸ್ಥೆಯ ಆಗಿರುವ ICMR, ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಾರಂಭಿಸಬೇಕು ಮತ್ತು ಈ ರೀತಿಯ ಸಾವುಗಳ ಮಾಹಿತಿಗಳನ್ನು ಸಂಗ್ರಹಿಸಿ, ಅದಕ್ಕೆ ಕಾರಣಗಳ ವಿಶ್ಲೇಷಣೆ ನಡೆಸಬೇಕು ಮತ್ತು ಅಂತಹ ಜೀವನಷ್ಟವನ್ನು ತಡೆಯಲು ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಮೂಲಕ ನಾನು ಒತ್ತಾಯಿಸುತ್ತೇನೆ. ತಮ್ಮಿಂದ ಸಕಾರಾತ್ಮಕವಾದ ಮತ್ತು ಸಮಾಧಾನಕರವದ ಪ್ರತಿಕ್ರಿಯೆ ತಡಮಾಡದೇ ಬಂದೀತೆಂಬ ನಿರೀಕ್ಷೆಯಲ್ಲಿದ್ದೇನೆ.
- ತಮ್ಮ ವಿಶ್ವಾಸಿ, ರಾಜಾರಾಂ ತಲ್ಲೂರು (ಮಾಜೀ ಪತ್ರಕರ್ತ), ಉಡುಪಿ.