ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಜೈಲಿನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ವರದಿಯಾಗಿದೆ.
ತಮಿಳುನಾಡಿನ ವೆಲ್ಲೂರಿನಲ್ಲಿರುವ ಮಹಿಳಾ ಕಾರಾಗ್ರಹದಲ್ಲಿರುವ ನಳಿನ್ ಶ್ರೀಹರನ್ ಕಳೆದ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಆಕೆ ಪರ ವಕೀಲ ಪುಗಲಂತಿ ತಿಳಿಸಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯಾಗಿರುವ ಈಕೆ ಕಳೆದ 29 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.
ಪುಗಲಂತಿ ಪ್ರಕಾರ ನಳಿನಿ ಮತ್ತು ಜೈಲಿನಲ್ಲಿರುವ ಮತ್ತೋರ್ವ ಜೀವಾವದಿ ಶಿಕ್ಷೆಗೊಳಗಾದ ಅಪರಾಧಿಯ ನಡುವೆ ಜಗಳವಾಗಿದೆ. ಈ ವಿಷಯವನ್ನು ಇತರ ಕೈದಿಗಳು ಜೈಲರ್‌ಗೆ ತಿಳಿಸಿದಾಗ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ 29 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಳಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆಕೆಯ ವಕೀಲ ಪುಗಲೆಂತಿ ಹೇಳಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಳಿನಿ ಪತಿ ಮುರುಗನ್, ಜೈಲಿನಿಂದ ವಕೀಲರಿಗೆ ಕರೆ ಮಾಡಿ ನಳಿನಿಯನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆದಷ್ಟು ಬೇಗ ಕಾನೂನಿನ ಮೊರೆ ಹೋಗುವುದಾಗಿ ವಕೀಲರು ತಿಳಿಸಿದ್ದಾರೆ.
1991 ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರ್ ನಲ್ಲಿ ಚುನಾವಣಾ ಸಮಾವೇಶಕ್ಕೆ ತರೆಳಿದ್ದ ರಾಜೀವ್ ಗಾಂಧಿಯವರ ಹತ್ಯೆ ನಡೆದಿತ್ತು.