- ಉತ್ತರ ಕರ್ನಾಟಕದ ಕ್ಯಾಸೆಟ್ ಯುಗದ ಕಿಂಗ್ ಎಂದೇ ಖ್ಯಾತರಾಗಿದ್ದ ರಾಜು ತಾಳಿಕೋಟೆ ನಿಧನ
- ಉಡುಪಿಯಲ್ಲಿ ಹಾರ್ಟ್ ಅಟ್ಯಾಕ್ ನಿಂದ ರಾಜು ತಾಳಿಕೋಟೆ ವಿಧಿವಶ
- ಅಗಲಿದ ಹಾಸ್ಯ ಚಕ್ರವರ್ತಿಗೆ ಹಲವಾರು ಗಣ್ಯರಿಂದ ಸಂತಾಪ
Udupi: ಉತ್ತರ ಕರ್ನಾಟಕದ ಹಾಸ್ಯದ ಲೋಕವನ್ನು ತನ್ನ ವೈಶಿಷ್ಟ್ಯಪೂರ್ಣ ಅಭಿನಯದ ಮೂಲಕ ಮೆಚ್ಚಿಸಿ ಹಲವಾರು ಅಭಿಮಾನಿಗಳ ಹೊಂದಿದ್ದ ರಾಜು ತಾಳಿಕೋಟೆ ಅವರು ಇಹಲೋಕ ತ್ಯಜಿಸಿದ್ದಾರೆ. (Raju Talikote passes away)
ತಮ್ಮ ಹಾಸ್ಯ ನಟನೆಯ ಮೂಲಕ ಜನಮನ ಗೆದ್ದ ಈ ನಟ, 62ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಧಾರವಾಡ ರಂಗಾಯಣದ ನಿರ್ದೇಶಕ, ನಟ, ರಂಗಭೂಮಿ ಕಲಾವಿದ ಹಾಗೂ “ಕ್ಯಾಸೆಟ್ ಯುಗದ ಕಿಂಗ್” ಎಂದು ಖ್ಯಾತರಾದ ರಾಜು ತಾಳಿಕೋಟೆಯ ನಿಧನ ಕಲಾರಂಗಕ್ಕೆ ದೊಡ್ಡ ಆಘಾತ ತಂದಿದೆ.

ರಾಜು ತಾಳಿಕೋಟೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಟ ಶೈನ್ ಶೆಟ್ಟಿ (Shine Shetty) ಅಭಿನಯದ “ಶಂಕರಾಭರಣ” ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.
ಆದರೆ, ಭಾನುವಾರ ರಾತ್ರಿ 11.59ರ ಸುಮಾರಿಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ತುರ್ತಾಗಿ ಹೆಬ್ರಿ ಆಸ್ಪತ್ರೆ ಹಾಗೂ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ (KMC Hospital) ದಾಖಲಿಸಲಾಯಿತು.
ವೈದ್ಯಕೀಯ ಚಿಕಿತ್ಸೆ ಫಲಿಸದೇ, ಸೋಮವಾರ ಸಂಜೆ 6 ಗಂಟೆಯ ವೇಳೆ ಅವರು ನಿಧನರಾದರು.(Raju Talikote passes away)
ಶೂಟಿಂಗ್ ಪ್ರಾರಂಭಕ್ಕೂ ಮುನ್ನ, ರಾಜು ತಾಳಿಕೋಟೆ ತಮ್ಮ ಗೆಳೆಯರೊಂದಿಗೆ ಉಡುಪಿಯ ಕಡಲತೀರಕ್ಕೆ ತೆರಳಿ, ಸಮುದ್ರದ ಸೌಂದರ್ಯವನ್ನು ಆನಂದಿಸಿದ್ದರು.
ಇಷ್ಟದ ಮೀನಿನ ಖಾದ್ಯಗಳನ್ನು ಸವಿದು ಸಂತೋಷ ವ್ಯಕ್ತಪಡಿಸಿದ್ದರು. ಆದರೆ, ಈ ಪ್ರವಾಸವೇ ಅವರ ಅಂತಿಮ ಪ್ರವಾಸವಾಗಿದ್ದು ಬೇಸರದ ಸಂಗತಿಯಾಗಿದೆ.
ಇಷ್ಟದ ಮೀನಿನ ಖಾದ್ಯಗಳನ್ನು ಸವಿದು ಸಂತೋಷ ವ್ಯಕ್ತಪಡಿಸಿದ್ದರು. ಆದರೆ, ಈ ಪ್ರವಾಸವೇ ಅವರ ಅಂತಿಮ ಪ್ರವಾಸವಾಗಿದ್ದು ಬೇಸರದ ಸಂಗತಿಯಾಗಿದೆ.
ಇನ್ನು ರಾಜು ತಾಳಿಕೋಟೆಯ ನಿಜವಾದ ಹೆಸರು ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ(Rajesab Muktam Saab Yankanchi).
ಇಸ್ಲಾಂ ಧರ್ಮದವರಾದರೂ “ರಾಜು” ಎಂಬ ಹೆಸರಿನ ಮೂಲಕ ಅವರು ಎಲ್ಲರ ಹೃದಯಗಳಲ್ಲಿ ನೆಲೆಯೂರಿದರು.
35 ವರ್ಷಗಳ ಕಾಲ ರಂಗಭೂಮಿಗೆ ಸೇವೆ ಸಲ್ಲಿಸಿ, 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು, ನಗುವಿನ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಪಾತ್ರಗಳಿಂದ ವಿಶಿಷ್ಟ ಸ್ಥಾನ ಪಡೆದಿದ್ದರು.
“ಕಲಿಯುಗದ ಕುಡುಕ” ಎಂಬ ನಾಟಕದ ಮೂಲಕ ಅವರು ಪ್ರಖ್ಯಾತಿ ಪಡೆದರು. ಬಳಿಕ ಯೋಗರಾಜ್ ಭಟ್ (Yogaraj Bhat) ನಿರ್ದೇಶನದ “ಪಂಚರಂಗಿ”, “ಮನಸಾರೆ”, “ಪರಮಾತ್ಮ” ಚಿತ್ರಗಳಲ್ಲಿ ಹಾಸ್ಯಭರಿತ ಪಾತ್ರಗಳಿಂದ ಜನರ ಮನ ಗೆದ್ದರು.
ಅವರ ಅಭಿನಯದಲ್ಲಿ ಉತ್ತರ ಕರ್ನಾಟಕದ ಭಾಷೆಯ ಸ್ವಾದ ಸವಿಯಬಹುದಿತ್ತು.
2024ರ ಆಗಸ್ಟ್ 16ರಂದು ಧಾರವಾಡ ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡ ರಾಜು ತಾಳಿಕೋಟೆ, ರಂಗಭೂಮಿಗೆ ಹೊಸ ಚೈತನ್ಯ ತರಲು ಯೋಜನೆ ರೂಪಿಸಿದ್ದರು.
ಅಕ್ಟೋಬರ್ 28ರಂದು ತಮ್ಮ 61ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಬೇಕೆಂಬ ಯೋಜನೆ ಇತ್ತು.
ಆದರೆ ಅದಕ್ಕೂ ಮುನ್ನವೇ ವಿಧಿಯಾಟ ಕ್ಕೆ ಬಲಿಯಾಗಿದ್ದಾರೆ.ರಾಜು ತಾಳಿಕೋಟೆಗೆ ಇಬ್ಬರು ಪತ್ನಿಯರು ಮತ್ತು ಐದು ಮಕ್ಕಳು (ಮೂರು ಹೆಣ್ಣು, ಇಬ್ಬರು ಗಂಡು) ಇದ್ದಾರೆ.
ಕುಟುಂಬದೊಂದಿಗೆ ಅವರು ಅತ್ಯಂತ ಅನ್ಯೋನ್ಯ ಜೀವನ ನಡೆಸುತ್ತಿದ್ದರು.
ಬಡತನದಿಂದಲೇ ಪ್ರಾರಂಭಿಸಿ ತಮ್ಮ ಪ್ರತಿಭೆಯಿಂದ ಜನಪ್ರಿಯತೆಯ ಎತ್ತರ ತಲುಪಿದ ಇವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, (D.K.Shivakumar) ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಬೊಮ್ಮಾಯಿ, ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ತಮ್ಮ ಭಾವನೆಯನ್ನು ಹಂಚಿಕೊಳ್ಳುತ್ತಾ, ರಾಜು ತಾಳಿಕೋಟೆ ನನ್ನ ಸಿನಿಮಾಗಳ ಆತ್ಮ.
ಅವರ ನಗು, ಅವರ ಮಾತುಗಳು, ಅವರ ವ್ಯಕ್ತಿತ್ವ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.