- ಬೆಂಗಳೂರು ಬಸ್ ಕೊರತೆ ವಿಚಾರದಲ್ಲಿ ಸರ್ಕಾರದ (Ramalinga Reddy challenge Mohandas Pai) ನಿಲುವು ವಿರುದ್ಧ ಉದ್ಯಮಿ ಪೈ ಆಕ್ರೋಶ, ಚರ್ಚೆಗೆ ಆಹ್ವಾನಿಸಿದ ಸಚಿವರು
- ಬ್ಯಾಲೆನ್ಸ್ ಶೀಟ್ ಅಲ್ಲ, 1.5 ಕೋಟಿ ಜನ ಮುಖ್ಯ: ಮೋಹನ್ ದಾಸ್ ಪೈ ವಿರುದ್ಧ ಕಿಡಿ ಕಾರಿದ ರಾಮಲಿಂಗಾ ರೆಡ್ಡಿ
- 10,000 ಬಸ್ ಕೊರತೆ ಆರೋಪ: ಖಾಸಗಿ ಸೇವೆ ಚರ್ಚೆ ಮತ್ತೆ ಜೀವಂತ
Bengaluru: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ (Ramalinga Reddy challenge Mohandas Pai) ಅಸ್ತಂಭವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ತೀವ್ರ ಬಸ್ ಕೊರತೆಯನ್ನು ಎದುರಿಸುತ್ತಿದೆ.
ಪ್ರಸ್ತುತ ರಾಜಧಾನಿಯಲ್ಲಿ 10,000ಕ್ಕೂ ಹೆಚ್ಚು ಬಸ್‌ಗಳ ಕೊರತೆ ಇದೆ ಎನ್ನುವುದು ಹಲವು ತಜ್ಞರು ಹಾಗೂ ನಾಗರಿಕರ ಆರೋಪ.
ಈ ಹಿನ್ನೆಲೆ ಬಸ್ ಖರೀದಿ ಪ್ರಕ್ರಿಯೆಯ ವಿಳಂಬ ಮತ್ತು ಆಡಳಿತದ ದಕ್ಷತೆ ಕುರಿತು ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿದ್ದರು. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) , ಪೈ ಅವರನ್ನು ನೇರ ಚರ್ಚೆಗೆ ಆಹ್ವಾನಿಸಿ ಬಹಿರಂಗ ಸವಾಲು ಹಾಕಿದ್ದಾರೆ.

ಕೇವಲ ಟ್ವೀಟ್‌ಗಳಲ್ಲೇ ಟೀಕೆ ಮಾಡದೆ, ವಾಸ್ತವಾಂಶಗಳೊಂದಿಗೆ (Ramalinga Reddy challenge Mohandas Pai) ಮುಖಾಮುಖಿ ಚರ್ಚೆಗೆ ಬರಲಿ ಎಂದು ಸಚಿವರು ಹೇಳಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ BMTC ಕಾರ್ಯಾಚರಣೆ, ಬಸ್ ಖರೀದಿ ಪ್ರಕ್ರಿಯೆ ಮತ್ತು ಸರ್ಕಾರದ ಸಾಮಾಜಿಕ ಬದ್ಧತೆ ಕುರಿತು ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.
“ನೀವು ಬ್ಯಾಲೆನ್ಸ್ ಶೀಟ್ (Balance sheet) ಮಾತ್ರ ನೋಡುತ್ತೀರಿ, ನಾನು 1.5 ಕೋಟಿ ನಾಗರಿಕರನ್ನು ನೋಡುತ್ತೇನೆ” ಎಂದು ಪೈ ವಿರುದ್ಧ ತಿರುಗೇಟು ನೀಡಿದ ಸಚಿವರು, ಸಾರ್ವಜನಿಕ ಸಾರಿಗೆಯ ಉದ್ದೇಶ ಲಾಭವಲ್ಲ, ಸೇವೆ ಎಂದು ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಪ್ರಯಾಣವು ಕೇವಲ ಯೋಜನೆಯಲ್ಲ, ಬೃಹತ್ ಮಟ್ಟದ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವಾಗಿದೆ ಎಂದು ಅವರು ಹೇಳಿದರು.
ನಷ್ಟವಿದ್ದರೂ ಗ್ರಾಮೀಣ ಪ್ರದೇಶಗಳು, ವಿದ್ಯಾರ್ಥಿಗಳು ಹಾಗೂ ದೂರದ ಹಳ್ಳಿಗಳಿಗೆ ಬಸ್ ಸೇವೆ ಮುಂದುವರಿಸಲಾಗುತ್ತಿದೆ ಎಂಬುದನ್ನೂ ಅವರು ಒತ್ತಿ ಹೇಳಿದರು.
ಇದಕ್ಕೆ ಪ್ರತಿಯಾಗಿ ಮೋಹನ್ ದಾಸ್ ಪೈ ಅವರು, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ನಾಗರಿಕರು ತೀವ್ರ ಬಸ್ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಸಮರ್ಪಕ ಸಾರ್ವಜನಿಕ ಸಾರಿಗೆ ಒದಗಿಸಲು ವಿಫಲವಾಗಿದೆ ಎಂದು ಟೀಕಿಸಿದ ಅವರು, ಖಾಸಗಿ ಬಸ್‌ಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಸಾರಿಗೆ ಎಂಬುದು ಪಿಎಸ್‌ಯು ಮಾತ್ರ ನಡೆಸಬೇಕು ಎಂಬ “ಡಾಗ್ಮಾಟಿಕ್” (Dogmatic) ಮನೋಭಾವದಿಂದ ಸರ್ಕಾರ ಹೊರಬರಬೇಕು ಎಂದು ಪೈ ಅಭಿಪ್ರಾಯಪಟ್ಟರು.
ಸರ್ಕಾರ ಅಥವಾ ಖಾಸಗಿ—ಯಾರು ಸೇವೆ ನೀಡಿದರೂ ಜನರಿಗೆ ಸಾರಿಗೆ ಅಗತ್ಯ ಪೂರೈಸಬೇಕು ಎಂಬುದೇ ಮುಖ್ಯ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಟೀಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯ ಆಡಳಿತಾವಧಿ (2019–2023) ಯಲ್ಲಿ ಸಾರಿಗೆ ನಿಗಮಗಳ ನೇಮಕಾತಿ ಸ್ಥಗಿತಗೊಂಡಿದ್ದಾಗ ಪೈ ಯಾವುದೇ ಪ್ರಶ್ನೆ ಕೇಳಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಜನಪರ ಸರ್ಕಾರ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ಕಾರ್ಪೊರೇಟ್ ಕಾಳಜಿ ಎಚ್ಚರಗೊಳ್ಳುವುದೇಕೆ ಎಂದು ಅವರು ಕುಟುಕಿದರು. ಖಾಸಗಿ ನಿರ್ವಾಹಕರು ಲಾಭ ಇಲ್ಲದಾಗ ಸೇವೆ ನಿಲ್ಲಿಸುತ್ತಾರೆ, ಆದರೆ ಸರ್ಕಾರ ನಷ್ಟವಿದ್ದರೂ ಜನಸೇವೆಯನ್ನು ಮುಂದುವರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ದಿನಗೂಲಿ ಕಾರ್ಮಿಕರು ಮತ್ತು ಸಾಮಾನ್ಯ ನಾಗರಿಕರಿಗೆ ನಿರಂತರ ಸಾರಿಗೆ ಸೇವೆ ಅತ್ಯಗತ್ಯ ಎಂಬುದನ್ನು ಅವರು ಪುನರುಚ್ಚರಿಸಿದರು.
ಪ್ರಸ್ತುತ ಕರ್ನಾಟಕ ಸಾರಿಗೆ ಇಲಾಖೆ ಒಟ್ಟು 26,054 ಬಸ್‌ಗಳನ್ನು ನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ಮಾತ್ರ ದಿನಕ್ಕೆ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ.
BMTC ಬಳಿ 1,686 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ 7,108 ಬಸ್‌ಗಳಿದ್ದು, ಪ್ರತಿದಿನ 13 ಲಕ್ಷ ಕಿಲೋಮೀಟರ್ ಸಂಚರಿಸಿ 66,000 ಟ್ರಿಪ್‌ಗಳನ್ನು ನಡೆಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ 5,800ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, 2026ರ ಮಾರ್ಚ್ ವೇಳೆಗೆ ಇನ್ನೂ 2,000 ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಈ ಮೂಲಕ ದೇಶದಲ್ಲೇ ಅತಿದೊಡ್ಡ ನಗರ ಸಾರಿಗೆ ಸೇವೆ ನಮ್ಮದಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದು, ಬಸ್ ಕೊರತೆ, ಖಾಸಗಿ ಭಾಗವಹಣೆ ಹಾಗೂ ಸಾರ್ವಜನಿಕ ಸೇವೆಯ ತತ್ವದ ಕುರಿತ ಚರ್ಚೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.