ಹಿಂದಿ(Hindi) ರಾಷ್ಟ್ರ ಭಾಷೆ(National Language) ಎಂದು ಟ್ವೀಟ್(Tweet) ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿವಾದ ಎಬ್ಬಿಸಿರುವ ಬಾಲಿವುಡ್ ನಟ(Actor) ಅಜಯ್ ದೇವಗನ್‍ಗೆ(Ajay Devgan) ಸ್ಯಾಂಡಲ್‍ವುಡ್ ಸ್ಟಾರ್(Sandalwood Star) ಕಿಚ್ಚ ಸುದೀಪ್(Kiccha Sudeep) ಟ್ವೀಟ್ ಮೂಲಕ ಭರ್ಜರಿ ಟಾಂಗ್ ನೀಡಿದ್ದರು.
ನಿನ್ನೆಯಿಂದ ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ, ಅಜಯ್ ದೇವಗನ್ ನಡುವಿನ ಭಾಷಾ ಸಂಘರ್ಷದ ಕುರಿತು ಇಡೀ ದಕ್ಷಿಣ ಭಾರತದ ಚಿತ್ರರಂಗ ಒಂದಾಗಿ ಅಜಯ್ ದೇವಗನ್ ಹೇಳಿಕೆಯನ್ನು ಖಂಡಿಸಿದೆ. ಇನ್ನು ಸಾಂಡಲ್‍ವುಡ್‍ನ ಅನೇಕ ತಾರೆಯರು ಕೂಡಾ ಕಿಚ್ಚನ ಬೆಂಬಲಕ್ಕೆ ನಿಂತಿದ್ದಾರೆ. ಮೋಹಕತಾರೆ ರಮ್ಯಾ “ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ತಿರಸ್ಕಾರ ಭಾವನೆ ವಿಪರ್ಯಾಸ. ಕೆಜಿಎಫ್, ಪುಷ್ಪ, ಆರ್‍ಆರ್‍ಆರ್ ನಂತಹ ಹಿಂದಿಯೇತರ ಸಿನಿಮಾಗಳು ಹಿಂದಿಯಲ್ಲಿ ಉತ್ತಮ ಪ್ರದರ್ಶನ ಕಂಡಿವೆ.
ಕಲೆಗೆ ಯಾವುದೇ ಭಾಷೆಯ ಅಡೆತಡೆ ಇಲ್ಲ. ನಿಮ್ಮ ಚಿತ್ರಗಳನ್ನು ನಾವು ಆನಂದಿಸಿದಂತೆ, ಇದೀಗ ನಮ್ಮ ಚಿತ್ರಗಳನ್ನು ನೀವು ನೋಡಿ ಆನಂದಿಸಿ” ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ. ಅದೇ ರೀತಿ ನಟ ನಿನಾಸಂ ಸತೀಶ್ ಟ್ವೀಟ್ ಮಾಡಿ, “ಕಳೆದ ಅನೇಕ ವರ್ಷಗಳಿಂದ ನಿಮ್ಮ ಸಿನಿಮಾಗಳು ನಮ್ಮ ನೆಲದಲ್ಲಿ ಹಣ ಮಾಡಿವೆ. ಈಗ ನಮ್ಮ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ. ನಾವು ನಿಮ್ಮ ಸಿನಿಮಾಗಳನ್ನು ಗೌರವಿಸಿದಂತೆ, ನೀವು ಕೂಡಾ ನಮ್ಮ ಸಿನಿಮಾ ಮತ್ತು ಭಾಷೆಯನ್ನು ಗೌರವಿಸಿ.
ಹಿಂದಿ ಅಂದಿಗೂ, ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಧ್ವನಿಗೆ ನಮ್ಮ ಧ್ವನಿ ಕಿಚ್ಚ ಸುದೀಪ್ ಸರ್” ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಜೊತೆಗೆ ತೆಲುಗು, ತಮಿಳು, ಮಲಯಾಳಿ ಚಿತ್ರರಂಗದ ಅನೇಕ ಕಲಾವಿದರು ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಕಿಚ್ಚನ ಧ್ವನಿಗೆ ಅನೇಕರು ಧ್ವನಿಯಾಗಿದ್ದಾರೆ.