ದೇಶಿಯ ಕ್ರಿಕೆಟ್ನ ರಣಜಿ ಹಬ್ಬ ಆರಂಭವಾಗಿದ್ದು, ಚೆನ್ನೈನಲ್ಲಿ ನಡೆಯುತ್ತಿರುವ ಕರ್ನಾಟಕ 00 ಮತ್ತು ರೈಲ್ವೆಸ್ ನಡುವಿನ ಪಂದ್ಯದಲ್ಲಿ ಪ್ರಥಮ ದಿನದಾಟದಂತ್ಯಕ್ಕೆ ಕರ್ನಾಟಕ ಉತ್ತಮ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ರನ್ ಕಲೆ ಹಾಕುವಷ್ಟರಲ್ಲಿ ಮೊದಲೆರಡು ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 16 ರನ್ಗೆ ರನೌಟ್ ಆಗಿದ್ದು, ದೇವದತ್ ಪಡಿಕ್ಕಲ್ 21 ರನ್ಗಳಿಸಿ ಯುವರಾಜ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ಆರ್. ಸಮರ್ಥ್ 47 ರನ್ಗೆ ಇನ್ನಿಂಗ್ಸ್ ಮುಗಿಸಿದರು. ಇವರ ಇನ್ನಿಂಗ್ಸ್ನಲ್ಲಿ ಎಂಟು ಬೌಂಡರಿಗಳಿದ್ದವು.

ಮೊದಲೆರಡು ವಿಕೆಟ್ ಪತನದ ಬಳಿಕ ಕೃಷ್ಣಮೂರ್ತಿ ಸಿದ್ಧಾರ್ಥ್ ಮತ್ತು ನಾಯಕ ಮನೀಷ್ ಪಾಂಡೆ ನಾಲ್ಕನೇ ವಿಕೆಟ್ಗೆ ಅಮೋಘ ಜೊತೆಯಾಟದ ಮೂಲಕ ಕರ್ನಾಟಕ ತಂಡವನ್ನು ಸುಭದ್ರ ಸ್ಥಿತಿಯತ್ತ ತಲುಪಿಸಿದರು. ದ್ವಿಶತಕದ ಜೊತೆಯಾಟವಾಡಿದ ಈ ಜೋಡಿ ನಾಲ್ಕನೇ ವಿಕೆಟ್ಗೆ 267 ರನ್ಗಳ ಜೊತೆಯಾಟವಾಡಿತು. ಮನೀಷ್ ಪಾಂಡೆ ಏಕದಿನ ಪಂದ್ಯದ ರೀತಿಯಲ್ಲಿ ಬ್ಯಾಟ್ ಬೀಸಿದ್ದು, 121 ಎಸೆತಗಳಲ್ಲಿ 12 ಬೌಂಡರಿ ಮತ್ತು 10 ಅಮೋಘ ಸಿಕ್ಸರ್ ನೆರವಿನಿಂದ 156 ರನ್ ಸಿಡಿಸಿದ್ರು. 128.93ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಪಾಂಡೆ ಬೊಂಬಾಟ್ ಆಟ ಪ್ರದರ್ಶಿಸಿದರು.

ಇನ್ನು ಪಾಂಡೆ ಜೊತೆಗೆ ಉತ್ತಮ ಆಟವಾಡಿದ ಕೃಷ್ಣಮೂರ್ತಿ ಸಿದ್ಧಾರ್ಥ್ 221 ಎಸೆತಗಳಲ್ಲಿ 140 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಮನೀಶ್ ಪಾಂಡೆ ವಿಕೆಟ್ ಪತನದ ಬಳಿಕ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಕೇವಲ ಐದು ರನ್ಗೆ ವಿಕೆಟ್ ಒಪ್ಪಿಸಿದರು. ಮೊದಲ ದಿನದಾಟಂತ್ಯಕ್ಕೆ ಕರ್ನಾಟಕ 5 ವಿಕೆಟ್ ಕಳೆದುಕೊಂಡು, 392 ರನ್ ಕಲೆಹಾಕಿದೆ. ರೈಲ್ವೇಸ್ ಪರ ಶಿವಂ ಚೌಧರಿ 2 ವಿಕೆಟ್, ಯುವರಾಜ್ ಸಿಂಗ್ ಮತ್ತು ಅವಿನಾಶ್ ಯಾದವ್ ತಲಾ 1 ವಿಕೆಟ್ ಪಡೆದರು.