ಹಣದುಬ್ಬರವನ್ನು ನಿಯಂತ್ರಿಸುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್(Reserve Bank Of India) ಮಹತ್ವದ ಕ್ರಮ ಕೈಗೊಂಡಿದ್ದು, ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ರೆಪೋ(Repo) ದರವನ್ನು ಶೇ.50 ಹೆಚ್ಚಳ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(Governer) ಶಕ್ತಿಕಾಂತ್ ದಾಸ್(Shakthikanth Das) ಹಣಕಾಸು ನೀತಿಯನ್ನು ಬಿಡುಗಡೆ ಮಾಡಿದ್ದು, ಜನಸಾಮಾನ್ಯರಿಗೆ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ.50ರಷ್ಟು ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿದರು. ಇದರೊಂದಿಗೆ ರಿಸರ್ವ್ ಬ್ಯಾಂಕ್‍ನ ಪರಿಷ್ಕೃತ ರೆಪೋ ದರ ಶೇಕಡಾ 4.90 ಆಗಲಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇಕಡಾ 6 ರಷ್ಟು ಇರಲಿದ್ದು, ಬೆಲೆಗಳು ನಿಯಂತ್ರಣದಲ್ಲಿರಲಿವೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಮೇ 4ರಂದು ರಿಸರ್ವ ಬ್ಯಾಂಕ್ ರೆಪೋ ದರವನ್ನು 0.40 ಹೆಚ್ಚಿಸಿತ್ತು. ಇದೀಗ ಮತ್ತೆ 0.50 ಹೆಚ್ಚಳ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆರು ಮಂದಿ ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿಯೂ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ. ಈ ಸಭೆಯಲ್ಲಿ ರೆಪೋ ದರ ಹೆಚ್ಚಳಕ್ಕೆ ಒಮ್ಮತದಿಂದ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ.