ನವ ನಾಯಕನ ಪ್ರವೇಶ ಯಾವಾಗಲೂ ಪ್ರೇಮ ಕತೆಯದ್ದೇ ಆಗಿರುತ್ತದೆ. ಹಾಗೆಯೇ ಅಭಯ್ ಎನ್ನುವ ನವನಟ ತನ್ನ ತಂದೆಯ ಅಭಯಹಸ್ತದಾಸರೆಯಲ್ಲಿ ನಾಯಕರಾಗಿದ್ದಾರೆ. ಅಭಯ್ ಅವರ ತಂದೆ ನಿರ್ಮಾಪಕ ಎಸ್. ಚಂದ್ರಶೇಖರ್ ಅವರಿಗೆ ಮಗನನ್ನು ನಾಯಕನಾಗಿಸುವ ಮನಸಾಗಿದೆ. ಹಾಗೆ ಚಿತ್ರಕ್ಕೂ `ಮನಸಾಗಿದೆ’ ಎಂದೇ ಹೆಸರಿಡಲಾಗಿದೆ.
ಎಸ್ . ಚಂದ್ರಶೇಖರ್ ಅವರು ಸ್ವತಃ ಕತೆ ಬರೆದು ಮಗನನ್ನು ನಾಯಕನಾಗಿಸುತ್ತಿರುವ ಚಿತ್ರದಲ್ಲಿ ಇಬ್ಬರು ನಾಯಕಿಯರನ್ನು ನೀಡಿದ್ದಾರೆ. ಶ್ರೀನಿವಾಸ್ ಶಿಡ್ಲಘಟ್ಟ ಅವರು ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮೇಘ ಶ್ರೀಯವರಂಥ ನುರಿತ ನಾಯಕಿಯ ಜೊತೆಗೆ ನವ ನಟಿ ಆತಿರಾ ಕೂಡ ಚಿತ್ರದ ಪಾತ್ರಗಳಿಗೆ ಜೀವ ತುಂಬಲಿದ್ದಾರೆ ಎನ್ನುವ ನಂಬಿಕೆ ನಿರ್ದೇಶಕರಲ್ಲಿದೆ. ಆದರೆ ಅಭಯ್ನನ್ನು ನಾಯಕನಾಗಿಸುವಾಗ ಚಿತ್ರಕ್ಕೆ ಸಂಬಂಧ ಇರದಿದ್ದರೂ ಒಂದು ಗೀತೆಯ ಮೂಲಕ ಪ್ರೇಕ್ಷಕರ ಆಶೀರ್ವಾದ ಗಳಿಸಬೇಕು ಎನ್ನುವ ತೀರ್ಮಾನ ನಿರ್ಮಾಪಕರು ಮಾಡಿದ್ದಾರೆ. ಅದರ ಪರಿಣಾಮವಾಗಿ ಒಂದು ಸುಂದರವಾದ ಹಾಡು ಅರಸು ಅಂತಾರೆಯವರ ರಚನೆಯಲ್ಲಿ ಹೊರಬಂದಿದೆ. ಆ ಗೀತೆಗೆ ಸಂಗೀತ ನೀಡಿ ಹಾಡಿರುವ ಮಾನಸಾ ಹೊಳ್ಳ ಅವರ ಪ್ರಯತ್ನ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಂಥದೊಂದು ಹಾಡಿನ ಬಿಡುಗಡೆಯನ್ನು ಮಲ್ಲೇಶ್ವರದ ಎಸ್ಆರ್ವಿ ಥಿಯೇಟರ್ನಲ್ಲಿ ನೆರವೇರಿಸಲಾಯಿತು.
ಚಿತ್ರದಲ್ಲಿ ಒಬ್ಬ ನಾಯಕಿಯ ಹಿಂದೆ ನಾಯಕನೇ ಹೋದರೆ, ಮತ್ತೊಂದು ನಾಯಕಿಯ ಆತನನ್ನೇ ಹುಡುಕಿಕೊಂಡು ಬಂದಿರುತ್ತಾಳೆ. ಕೊನೆಗೆ ನಾಯಕ ಯಾರನ್ನು ಜೋಡಿಯಾಗಿ ಪಡೆಯುತ್ತಾನೆ ಎನ್ನುವುದನ್ನು ಮನಸಾಗಿದೆ ಚಿತ್ರದಲ್ಲಿ ತೋರಿಸಲು ನಿರ್ದೇಶಕರು ಸಿದ್ಧವಾಗಿದ್ದಾರೆ. ನಾಯಕನ ಸಾಹಸ ತೋರಿಸಲು ತಾವು ಸಿದ್ಧವಾಗಿರುವುದಾಗಿ ಸ್ಟಂಟ್ ಕೊರಿಯೋಗ್ರಾಫರ್ ಥ್ರಿಲ್ಲರ್ ಮಂಜು ತಿಳಿಸಿದ್ದಾರೆ. `ಭಜರಂಗಿ’ಯಂಥ ಚಿತ್ರಕ್ಕೆ ಸಂಭಾಷಣೆ ರಚಿಸಿರುವ ರಘು ನಿಡುವಳ್ಳಿ ಚಿತ್ರದ ಸಂಭಾಷಣಾಕಾರರಾಗಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಚಿತ್ರತಂಡದ್ದಾಗಿದೆ.