ಇತ್ತೀಚಿಗೆ ಬಾಲಿವುಡ್(Bollywood) ಚಿತ್ರಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸ್ಯಾಂಡಲ್ ವುಡ್(Sandalwood) ಸಿನಿಮಾಗಳು(Cinema) ತಯಾರಾಗುತ್ತಿವೆ. ಕೆ.ಜಿ.ಎಫ್ -2(KGF 2), ವಿಕ್ರಾಂತ್ ರೋಣ(Vikrant Rona) ಮುಂತಾದ ಕನ್ನಡ ಸಿನಿಮಾಗಳು ರಾಷ್ಟ್ರಪಟ್ಟದಲ್ಲಿ ಸದ್ದು ಮಾಡುತ್ತಿರುವುದು ನಮಗೆ ಗೊತ್ತೇ ಇದೆ. ಈಗ ಈ ಪಟ್ಟಿಗೆ ‘ಗಾಳಿಪಟ-2’(Gaalipata 2) ಸಿನೆಮಾ ಕೂಡ ಸೇರಿಕೊಳ್ಳಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ಸರಿಯಾಗಿ 14 ವರ್ಷಗಳ ಹಿಂದೆ ಯೋಗರಾಜ್ ಭಟ್(Yograj Bhat) ಮತ್ತು ಗೋಲ್ಡನ್ ಸ್ಟಾರ್(Golden Star) ಗಣೇಶ್(Ganesh) ಕಾಂಬಿನೇಷನ್ನ ‘ಗಾಳಿಪಟ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದರ ಮುಂದಿನ ಭಾಗ ಬರುತ್ತದೆ ಎಂದು ಅನೌನ್ಸ್ ಮಾಡಿದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿತ್ತು. ಈಗಾಗಲೇ ಸಿನಿಮಾದ ಹಾಡುಗಳನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ.
ಅರ್ಜುನ್ ಜನ್ಯ(Arjun Janya) ಸಂಗೀತ(Music) ನೀಡಿರುವ ಹಾಡುಗಳು(Songs) ಸೂಪರ್ ಹಿಟ್ ಆಗಿವೆ. ‘ದೇವ್ಲೇ ದೇವ್ಲೇ’, ‘ನೀನು ಬಗೆಹರಿಯದ ಹಾಡು’, ‘ಎಕ್ಸಾಂ ಸಾಂಗ್’ ಗೀತೆಗಳು ಟ್ರೆಂಡ್ ಸೆಟ್ ಮಾಡಿವೆ. ಗಣೇಶ್, ದಿಗಂತ್, ಪವನ್ ಕಾಂಬಿನೇಷನ್ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಆ ದಿನ ಕೊನೆಗೂ ಬಂದಿದೆ. ಹೌದು, ಇಂದು ‘ಗಾಳಿಪಟ-2’ ರಿಲೀಸ್ ಆಗಿದ್ದು ಪ್ರೇಕ್ಷಕರು ಸಿನೆಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಏನೆಂದರೆ, ಆಗಸ್ಟ್ 11 ರಂದು ಬಾಲಿವುಡ್ನ ‘ರಕ್ಷಾ ಬಂಧನ್’ ಹಾಗೂ ‘ಲಾಲ್ ಸಿಂಗ್ ಚಡ್ಡಾ’(Lal Singh Chadda) ಸಿನಿಮಾಗಳು ರಿಲೀಸ್ ಆಗಿವೆ. ಈ ಚಿತ್ರಗಳ ಮೇಲೂ ಬಹಳ ನಿರೀಕ್ಷೆಯಿದೆ, ಆದರೆ ಈ ಸಿನಿಮಾಗಳಿಗೆ ‘ಗಾಳಿಪಟ 2’ ಸಮರ್ಥ ಪೈಪೋಟಿ ನೀಡುತ್ತಿದೆ ಎನ್ನುವುದು ಖುಷಿಯ ಸಂಗತಿ. ಏಕೆಂದರೆ, ಬುಕ್ ಮೈ ಶೋನಲ್ಲಿ ‘ಗಾಳಿಪಟ 2’ ಚಿತ್ರಕ್ಕೆ 63 ಸಾವಿರ ಲೈಕ್ಸ್ ಬಂದಿವೆ. ಈ ಮೂಲಕ ಕನ್ನಡದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವ ಸೂಚನೆ ಮೊದಲೇ ಸಿಕ್ಕಿತ್ತು.
ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 11ರ ರಾತ್ರಿಯೇ ಕೆಲವೆಡೆ ಫ್ಯಾನ್ಸ್ ಶೋ ನಡೆದಿದೆ. ಎಲ್ಲರಿಗಿಂತ ಮುನ್ನ ಸಿನಿಮಾ ನೋಡಿ ಅಭಿಮಾನಿಗಳು ತಮ್ಮ ವಿಮರ್ಶೆ(Critic) ಹಂಚಿಕೊಂಡಿದ್ದಾರೆ. ಯೋಗರಾಜ್ ಭಟ್ರು ಒಳ್ಳೆ ಸೆಂಟಿಮೆಂಟ್ ಇಟ್ಟಿದ್ದಾರೆ, ಕೊಟ್ಟ ಕಾಸಿಗೆ ಮೋಸ ಇಲ್ಲ, ದಿಗಂತ್ ಕಾಮಿಡಿ ತುಂಬ ಚೆನ್ನಾಗಿದೆ, ಮೊದಲ ಪಾರ್ಟ್ಗೆ ಹೋಲಿಕೆ ಮಾಡದೇ ನೋಡಬೇಕು ಎಂಬ ಇತ್ಯಾದಿ ಅಭಿಪ್ರಾಯ ಸಿನಿ ಪ್ರಿಯರಿಂದ ಕೇಳಿಬಂದಿದೆ.

ಅಷ್ಟಕ್ಕೂ ‘ಗಾಳಿಪಟ-2’ ಸಿನೆಮಾ ಕಥೆಯ ಎಳೆ ಏನು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ. ಕನ್ನಡ ಕಲಿಯುವ ಉದ್ದೇಶದಿಂದ ನೀರುಕೋಟೆ ಕಾಲೇಜಿಗೆ ಗಣಿ (ಗಣೇಶ್) ಸೇರಿಕೊಳ್ಳುತ್ತಾನೆ, ಅವನ ಜೊತೆ ದಿಗಂತ್ ಹಾಗೂ ಭೂಷಣ್ (ಪವನ್) ಕೂಡ ಇರುತ್ತಾರೆ. ಗಣಿಗೆ ಅದೇ ಕಾಲೇಜಿನ ಹುಡುಗಿ ಶ್ವೇತಾ (ವೈಭವಿ) ಮೇಲೆ ಪ್ರೀತಿ ಉಂಟಾಗುತ್ತದೆ, ಇತ್ತ ದಿಗಂತ್ಗೆ ಬ್ರೇಕ್ ಅಪ್ ಮಾಡಿಕೊಂಡ ಮಾಜಿ ಗೆಳತಿ (ಸಂಯುಕ್ತಾ ಮೆನನ್) ಮತ್ತೆ ಸಿಗುತ್ತಾಳೆ. ಅದೇ ಕಾಲೇಜಿನ ಟೀಚರ್ ಮೇಲೆ ಭೂಷಣ್ಗೆ ಪ್ರೀತಿ ಹುಟ್ಟುತ್ತದೆ.
ಹೀಗೆ ಸಾಗುತ್ತಿರುವ ಈ ಮೂವರ ಬದುಕಿನಲ್ಲಿ ಕನ್ನಡ ಮೇಷ್ಟ್ರಾಗಿ ಎಂಟ್ರಿ ಕೊಡುವ ಅನಂತ್ ನಾಗ್(Anant Nag) ಪಾತ್ರವೇ ಮಹತ್ತರ ತಿರುವು ನೀಡುವುದು. ಇಂಟರ್ವಲ್ ನಂತರದ ಕಥೆ ನಡೆಯುವುದು ವಿದೇಶದಲ್ಲಿ. ಇದಕ್ಕೆ ಕಾರಣವೇನು? ಕನ್ನಡ ಮೇಷ್ಟ್ರಿಗೂ ಈ ಮೂವರು ಯುವಕರಿಗೂ ಏನು ಸಂಬಂಧ ಎನ್ನುವುದೇ ಮುಖ್ಯ ತಿರುಳು. ನಿರ್ದೇಶಕ ಯೋಗರಾಜ್ ಭಟ್ ಸಂಭಾಷಣೆ ಅಲ್ಲಲ್ಲಿ ನಗು, ಆಗಾಗ ಭಾವುಕತೆಯನ್ನು ಸೃಷ್ಟಿಸುತ್ತದೆ.

ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಬಿಗಿತನ ಬೇಕಿತ್ತು ಎನಿಸುತ್ತದೆ. ಕೊನೆಯ 15 ನಿಮಿಷಗಳಲ್ಲಿ ಇಡೀ ಸಿನಿಮಾವನ್ನು ಕೊಂಚ ಎತ್ತರಕ್ಕೆ ತಲುಪಿಸುವ ಪ್ರಯತ್ನವಾಗಿದೆ. ಅಂತ್ಯದಲ್ಲಿನ ಬರವಣಿಗೆಯ ಗುಣಮಟ್ಟವೇ ಆರಂಭದಿಂದಲೂ ಇದ್ದಿದ್ದರೆ, ‘ಗಾಳಿಪಟ 2’ ಇನ್ನಷ್ಟು ಎತ್ತರದಲ್ಲಿ ಹಾರುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು, ಗಣೇಶ್ ಅಭಿನಯದ ಬಗ್ಗೆ ಹೇಳಬೇಕಾಗಿಲ್ಲ. ಗಣಿ ಪಾತ್ರದೊಳಗೆ ಅಕ್ಷರಶಃ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ದಿಗಂತ್ ಪಾತ್ರ ಆಗಾಗ ರಿಲೀಫ್ ನೀಡುತ್ತದೆ. ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ ದ್ಯಶ್ಯಗಳಲ್ಲಿ ಹೊಸತನವಿದ್ದು, ಮಜವಾದ ಲವ್ ಸ್ಟೋರಿಯನ್ನು ಈ ಜೋಡಿ ಅಚ್ಚುಕಟ್ಟಾಗಿ ನಿಭಾಯಿಸಿದೆ. ಒಟ್ಟಾರೆ, ಯೋಗರಾಜ್ ಭಟ್ ಅವರ ಶೈಲಿಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಮನೋರಂಜನೆಯ ಔತಣದಂತಿದೆ.

ಆದರೆ, ‘ಗಾಳಿಪಟ’ ಸಿನಿಮಾ ಕಥೆಯನ್ನೇ ಮನಸ್ಸಲ್ಲಿಟ್ಟುಕೊಂಡು ‘ಗಾಳಿಪಟ 2’ ನೋಡಲು ಹೋಗುವುದಕ್ಕಿಂತ, ಗಣಿ-ಭಟ್ರು ಕಾಂಬಿನೇಶನ್ ಸಿನಿಮಾ ಎಂದಷ್ಟೇ ನೋಡುವುದು ಸೂಕ್ತ.
- ಪವಿತ್ರ