ಮೈಸೂರು, ಜೂ. 04: ಜಿಲ್ಲಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ಜನಪ್ರತಿನಿಧಿಗಳು ಮಾಡಿರುವ ಆರೋಪಗಳ ಜೊತೆಗೆ ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಆತಂಕ ಎದುರಾಗಿರುವ ನಡುವೆಯೇ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಈಜುಕೊಳ ಹಾಗೂ ಜಿಮ್ ನಿರ್ಮಿಸಲಾಗಿತ್ತು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಈ ಎರಡು ಕಟ್ಟಡಗಳ ನಿರ್ಮಾಣ ಮಾಡಿದ್ದು, ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿತ್ತಾದರೂ, ಈ ಬಗ್ಗೆ ತನಿಖೆ ನಡೆಸುವ ಕುರಿತು ಈವರೆಗೂ ಯಾವುದೇ ಆದೇಶಗಳು ಹೊರಬಿದ್ದಿರಲಿಲ್ಲ.
ಆದರೆ, ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಡಿಸಿ ರೋಹಿಣಿ ಸಿಂಧೂರಿ, ದಬ್ಬಾಳಿಕೆ ಹಾಗೂ ಕಾರ್ಯವೈಖರಿ ವಿರುದ್ಧ ಆರೋಪಗಳ ಸರಮಾಲೆಯನ್ನೇ ಬಹಿರಂಗಗೊಳಿಸಿದ್ದರು. ಪಾಲಿಕೆ ಆಯುಕ್ತೆ ಸಿಡಿಸಿದ ಈ ಬಾಂಬ್, ಡಿಸಿ ರೋಹಿಣಿ ಸಿಂಧೂರಿ ಅವರ ಪಾಲಿಗೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ.
ಪ್ರಮುಖವಾಗಿ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ನಿರ್ಮಿಸಿರುವ ಜಿಮ್ ಹಾಗೂ ಈಜುಕೊಳಕ್ಕೆ ಸಂಬಂಧಿಸಿದಂತೆ ಶೀಘ್ರ ತನಿಖೆ ನಡೆಸಿ 7 ದಿನಗಳೊಳಗೆ ಪೂರ್ಣ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸರ್ಕಾರದ ಉಪ ಕಾರ್ಯದರ್ಶಿ ಕೆ.ಎನ್. ಮೂರ್ತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗಿರುವ ಕುರಿತು ಬಂದಿರುವ ದೂರಿನ ತನಿಖೆ ನಡೆಸಲು ಸರ್ಕಾರದ ಉಪ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಒಳಾಂಗಣ ಈಜುಕೊಳ ಹಾಗೂ ಜಿಮ್ ನಿರ್ಮಾಣ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾಧಿಕಾರಿ ವಾಸವಿರುವ ಸರ್ಕಾರಿ ನಿವಾಸದ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ಅಲ್ಲಿ ಹೊಸ ಕಾಮಗಾರಿಗಳನ್ನು ನಡೆಸಲು ಅವಕಾಶ ಇರುವುದಿಲ್ಲವೆಂದು ತಿಳಿಸಲಾಗಿದೆ.
ಆದ್ದರಿಂದ ಪ್ರಕರಣದ ಕುರಿತಂತೆ ನಿಯಮಾನುಸಾರ ಪರಿಶೀಲಿಸಿ ತನಿಖೆ/ವಿಚಾರಣೆ ನಡೆಸಿ, ಈ ಕುರಿತು ಪೂರ್ಣ ಪ್ರಮಾಣದ ವರದಿಯನ್ನು 7 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಉಪ ಕಾರ್ಯದರ್ಶಿ ಕೆ.ಎನ್.ಮೂರ್ತಿ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದ್ದಾರೆ.