ಬೆಂಗಳೂರು, ಜೂ. 07: ರಾಜ್ಯಮಟ್ಟದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದ್ದ ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ನಡುವಿನ ತಿಕ್ಕಾಟ ಕಡೆಗೂ ವರ್ಗಾವಣೆಯಲ್ಲಿ ಅಂತ್ಯ ಕಂಡಿದೆ.
ಇಬ್ಬರೂ ಅಧಿಕಾರಿಗಳ ನಡುವೆ ಮೂಡಿದ್ದ ಅಸಮಾಧಾನದಿಂದ ನಡೆದ ಮಹತ್ವದ ಬೆಳವಣಿಗೆಗಳ ಬಳಿಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಶನಿವಾರ ರಾತ್ರಿ ಎತ್ತಂಗಡಿ ಮಾಡಲಾಗಿದೆ.
ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಸಹ ರೋಹಿಣಿ ಸಿಂಧೂರಿ ಅವರು ಇದೇ ಹುದ್ದೆಯಲ್ಲಿದ್ದರು. ಇನ್ನೂ ಶಿಲ್ಪಾನಾಗ್ ಅವರನ್ನು ಆವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ.
ಈ ಇಬ್ಬರೂ ಅಧಿಕಾರಿಗಳ ವರ್ಗಾವಣೆ ಬಳಿಕ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಜತೆಗೆ ಆಹಾರ ಮತ್ತು ನಾಗರಿಕ ಸಬರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಿಸಲಾಗಿದೆ.
ವರ್ಗಾವಣೆಯಾದ ಇತರರು: ಪಿ. ರಾಜೇಂದ್ರ ಚೋಳನ್– ಆಡಳಿತ ನಿರ್ದೇಶಕ, ಬೆಸ್ಕಾಂ ಹೆಚ್ಚುವರಿಯಾಗಿ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಹುದ್ದೆ ಮತ್ತು ದಯಾನಂದ ಕೆ.ಎ– ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ)