ಬೆಂಗಳೂರು : ಆರ್ಎಸ್ಎಸ್ನ(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagawath) ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಜುಲೈ 11 ರಂದು ಚಿತ್ರದುರ್ಗದಲ್ಲಿ(Chitradurga) ಭೇಟಿಯಾಗಲಿದ್ದು, ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಕನಾಟಕದ ದಲಿತ ಧಾರ್ಮಿಕ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಸಾಧಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಮುಖ್ಯಸ್ಥರ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಇನ್ನು ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಪರಿಶಿಷ್ಟ ಜಾತಿಯ ಎಡ ಸಮುದಾಯದ ಪ್ರಮುಖ ಧಾರ್ಮಿಕ ಮುಖಂಡರಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ‘ಶಿಲಾನ್ಯಾಸ’ ಕಾರ್ಯಕ್ರಮಕ್ಕೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆಯೇ ಅವರು ಆರ್ಎಸ್ಎಸ್ ಮುಖ್ಯಸ್ಥರಾಗಿರುವ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ, ಗುರುಪೀಠಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು ಎನ್ನಲಾಗಿದೆ. ಇನ್ನು ಜುಲೈ ೧೧ರಂದು ಭಾಗವತ್ ಅವರು ಗುರುಪೀಠಕ್ಕೆ ಭೇಟಿ ನೀಡುವ ವೇಳೆ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಭಾಗವತ್ ಜೊತೆಗಿರಲಿದ್ದಾರೆ.
ಇನ್ನು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ತಯಾರಿ ದೃಷ್ಟಿಯಿಂದ ಆರ್ಎಸ್ಎಸ್ ನಾಯಕರು ಬೆಂಗಳೂರಿನಲ್ಲಿ `ಚಿಂತನ-ಮಂತನʼ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಮೋಹನ್ ಭಾಗವತ್ ಆಗಮಿಸುತ್ತಿದ್ದು, ಇದಕ್ಕೂ ಮುನ್ನ ಅವರು, ಮಾದಾರ ಚೆನ್ನಯ್ಯ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯವೂ ಬಿಜೆಪಿಯನ್ನು ಬೆಂಬಲಿಸುವಂತೆ ಮಾಡುವ ಕಾರ್ಯತಂತ್ರದ ಭಾಗವಾಗಿ ಈ ಭೇಟಿ ನಿಗದಿಯಾಗಿದೆ ಎನ್ನಲಾಗಿದೆ.
ಮಾದಾರ ಚೆನ್ನಯ್ಯ ಸ್ವಾಮೀಜಿ, ಪರಿಶಿಷ್ಟ ಜಾತಿಯ ಎಡ ಸಮುದಾಯದ ಪ್ರಮುಖ ಧಾರ್ಮಿಕ ಮುಖಂಡರಾಗಿದ್ದು, ಸಮುದಾಯದ ಮೇಲೆ ಹಿಡಿತ ಸಾಧಿಸಿದ್ದಾರೆ. ನ್ಯಾ.ಸದಾಶಿವ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಅವರು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ನ್ಯಾ.ಸದಾಶಿವ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವೂ ವಿಫಲವಾದ ಕಾರಣ, ದಲಿತ ಎಡ ಸಮುದಾಯ, 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯತ್ತ ವಾಲಿತ್ತು.