ನವದೆಹಲಿ : ರಷ್ಯಾ(Russia) ಮತ್ತು ಉಕ್ರೇನ್(Ukraine) ಯುದ್ದದ ಪರಿಣಾಮ ಡಾಲರ್(Dollar) ಎದುರು ತೀವ್ರವಾಗಿ ಕುಸಿತ ಕಂಡಿದ್ದ ಭಾರತದ ರೂಪಾಯಿ(Indian Rupee) ಮೌಲ್ಯ ಇದೀಗ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೇರಿಕಾದ ಡಾಲರ್(American Dollar) ಎದುರು 44 ಪೈಸೆ ಏರಿಕೆಯಾಗಿ 79.30 ಕ್ಕೆ ತಲುಪಿದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 79.32 ಕ್ಕೆ ತೀವ್ರವಾಗಿ ಏರಿಕೆಯಾಗಿ, ನಂತರ 79.30ಕ್ಕೆ ಏರಿಕೆ ಕಂಡು, ದಿನದ ಮುಕ್ತಾಯಕ್ಕೆ 44 ಪೈಸೆಯ ಏರಿಕೆ ದಾಖಲಿಸಿತು ಎಂದು ಪಿಟಿಐ ವರದಿ ಮಾಡಿದೆ.
ಇನ್ನು ದೇಶೀಯ ಷೇರುಗಳಲ್ಲಿ ವೃದ್ದಿಯಾಗಿದ್ದು, ಸೆನ್ಸೆಕ್ಸ್(Sensex) 60,000 ಮಟ್ಟವನ್ನು ದಾಟಿದ್ದು, ಮಧ್ಯಮ ಹಣದುಬ್ಬರದ ಒತ್ತಡವು ಹೂಡಿಕೆದಾರರ ಭಾವನೆಗಳನ್ನು ಹೆಚ್ಚಿಸಿದೆ. ಇತ್ತೀಚಿನ ವಿನಿಮಯ ಮಾಹಿತಿಯ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,376.84 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ಆಗಸ್ಟ್ ಮೊದಲ ಎರಡು ವಾರಗಳಲ್ಲಿ ₹ 22,452 ಕೋಟಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಪಿಟಿಐ ಹೇಳಿದೆ.

ಇನ್ನು ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ಬೆಲೆ ಕುಸಿದಿದೆ. ರಷ್ಯಾ(Russia) ಉಕ್ರೇನ್(Ukraine) ಮೇಲೆ ಆಕ್ರಮಣ ಮಾಡುವ ಮೊದಲು ತೈಲ ಬೆಲೆಗಳು ಕೊನೆಯದಾಗಿ ಕಂಡ ಮಟ್ಟಕ್ಕೆ ಬ್ರೆಂಟ್ ಕಚ್ಚಾ ತೈಲ ಬೆಲೆ ಇಳಿದಿದೆ. ಇದು ಭಾರತದ ವ್ಯಾಪಾರ ಕೊರತೆ ಮತ್ತು ಹಣದುಬ್ಬರ ನಿಯಂತ್ರಿಸುವ ಸಾಧ್ಯತೆಯಿದೆ. ಜುಲೈನಲ್ಲಿ ಭಾರತದ ವ್ಯಾಪಾರದ ಕೊರತೆಯು 30 ಬಿಲಿಯನ್ ಡಾಲರ್ ಆಗಿತ್ತು.