ಈ ಜಗತ್ತೇ ವಿಸ್ಮಯಗಳ ಆಗರ. ಇಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ, ಅದರ ಮಧ್ಯೆ ಕೆಲವು ವಿಚಿತ್ರ ವ್ಯಕ್ತಿಗಳು ಚಿತ್ರ ವಿಚಿತ್ರವಾಗಿ ಆಡುತ್ತಾ, ಜಗತ್ತನ್ನೇ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾರೆ.
ಕೆಲವೊಮ್ಮೆ ಅಂತಹ ವ್ಯಕ್ತಿಗಳೂ ಮಹಾನ್ ದಾಖಲೆಗೆ(Record) ಪಾತ್ರರಾಗುವುದೂ ಉಂಟು! ಅಂತಹ ಒಂದು ವಿಚಿತ್ರ ಇಲ್ಲಿದೆ ನೋಡಿ. ಅಮೇರಿಕಾದ(America) 31 ವರ್ಷದ ಸಮಂತಾ ರಾಮ್ಸ್ಡೆಲ್(Samantha Ramsdell) ಅತ್ಯಂತ ದೊಡ್ಡ ಬಾಯಿಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.
ಈ ಹಿಂದೆ ತಮ್ಮ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಇವರು ಎಲ್ಲರ ಗಮನ ಸೆಳೆದಿದ್ದರು. ಇವರ ಈ ಸಾಮರ್ಥ್ಯ ಗಿನ್ನಿಸ್ ದಾಖಲೆ(Guiness Record) ಪುಟ ಸೇರುವಂತೆ ಮಾಡಿದ್ದು, 6.52 ಸೆ. ಮೀಟರ್ ಅಂದ್ರೆ 2.56 ಇಂಚು ಅಗಲ ಬಾಯಿ ತೆರೆಯುವ ಸಾಮರ್ಥ್ಯ ಇರುವ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ತನ್ನ ಬೇಸರ ಕಳೆಯಲು ಹಾಗೂ ಖುಷಿಯನ್ನು ಹಂಚುವ ಸಲುವಾಗಿ ಇವರು ಟಿಕ್ಟಾಕ್(TikTok) ಖಾತೆ ತೆರೆದಿದ್ದರು. ಕಡಿಮೆ ಅವಧಿಯಲ್ಲಿಯೇ ಇವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಈ ಅಭಿಮಾನಿಗಳಲ್ಲಿ ಕೆಲವರು ಇವರಿಗೆ ಗಿನ್ನಿಸ್ ವಿಶ್ವ ದಾಖಲೆಗೆ ಪ್ರಯತ್ನಿಸುವ ಸಲಹೆ ನೀಡಿದ್ದರು. ಅದರಂತೆಯೇ, ಕನೆಕ್ಟಿಕಟ್ನ ದಕ್ಷಿಣ ನಾರ್ವಾರ್ಕ್ನಲ್ಲಿರುವ ಸ್ಥಳೀಯ ದಂತ ವೈದ್ಯರಲ್ಲಿ ತೆರಳಿ ತಮ್ಮ ಬಾಯಿಯ ಅಗಲದ ಅಳತೆ ಮಾಡಿಸಿದ್ದರು.
ಗಿನ್ನಿಸ್ ವಿಶ್ವ ದಾಖಲೆಯ ತೀರ್ಪುಗಾರರ ಸಮ್ಮುಖದಲ್ಲಿ ಇವರ ಬಾಯಿಯ ಅಗಲದ ಅಳತೆ ಮಾಡಲಾಗಿತ್ತು. ಈ ದಾಖಲೆಯ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆ ತನ್ನ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು, ಈ ಖುಷಿಯ ವಿಷಯದ ಹಿಂದೆ ಇವರು ಸಾಕಷ್ಟು ನೋವು ಕೂಡಾ ಅನುಭವಿಸಿದ್ದರು.
ಏಕೆಂದರೆ, ಬಾಲ್ಯದಲ್ಲಿ ತನ್ನ ಅಗಲ ಬಾಯಿಯ ಕಾರಣದಿಂದಲೇ ಇವರು ಸಾಕಷ್ಟು ಅವಮಾನ ಅನುಭವಿಸಿದ್ದರಂತೆ. ಇತರ ಮಕ್ಕಳು ಇವರನ್ನು ತಮಾಷೆ ಮಾಡಿ ನಗುತ್ತಿದ್ದರಂತೆ. ಹೀಗೆ ಸಾಕಷ್ಟು ನೋವು ಅನುಭವಿಸಿದ್ದ ಇವರು ಬಳಿಕ ಇದನ್ನೆಲ್ಲಾ ಸಹಿಸಿಕೊಂಡು, ಒಪ್ಪಿಕೊಂಡು ಬದುಕುವುದನ್ನು ಕಲಿತುಕೊಂಡರು.
ಅಂದು ಅಪಹಾಸ್ಯ ಮಾಡಿದವರ ಮುಂದೆ ಬದುಕುವುದನ್ನು ಕಲಿತು, ಇಂದು ಸಾಧನೆಯ ಮುಖೇನ ನಗುವ ಬೀರುವುದನ್ನು ಕಲಿತಿದ್ದಾರೆ ಸಮಂತಾ.
- ಪವಿತ್ರ