ತಮಿಳುನಾಡು, ಮಾ. 04: ಮುಂಬರುವ ವಿಧಾನಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತೆ ವಿ. ಶಶಿಕಲಾ ನಟರಾಜನ್ ರಾಜಕೀಯ ಜೀವನಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ನಾಲ್ಕು ವರ್ಷಗಳ ಜೈಲುವಾಸದ ಬಳಿಕ ತಮಿಳುನಾಡಿಗೆ ತೆರಳಿದ್ದ ಶಶಿಕಲಾ ನಟರಾಜನ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದರು. ಈ ನಡುವೆ ಶಶಿಕಲಾ ಅವರು ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಎದುರಾಗಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಸಾಕಷ್ಟು ನಿರೀಕ್ಷೆ ಸಹ ಎದುರಾಗಿತ್ತು.
ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ರಾಜಕಾರಣದಿಂದ ದೂರ ಉಳಿಯುವ ಮನಸ್ಸು ಮಾಡಿರುವ ಶಶಿಕಲಾ ನಟರಾಜನ್, ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದಾರೆ.
ಆದರೆ, ಎಐಎಡಿಎಂಕೆ ಕಾರ್ಯಕರ್ತರು ಒಟ್ಟಾಗಿದ್ದು ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿ ಡಿಎಂಕೆ ಪಕ್ಷವನ್ನು ಸೋಲಿಸುವಂತೆ ಅವರು ಕರೆ ಕೊಟ್ಟಿದ್ದಾರೆ. ಶಶಿಕಲಾ ನಟರಾಜನ್ ಅವರನ್ನು ಈಗಾಗಲೇ ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆ ಚುನಾವಣೆ ಸಹ ಘೋಷಣೆ ಆಗಿದ್ದು, ಇದರ ಬೆನ್ನಲ್ಲೇ ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ನಿರ್ಧಾರ ಮಾಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.